ಗಂಗಾವತಿ: ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೇ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ನಗರಸಭೆಯ ಪೌರಾಯುಕ್ತರು ಮಳಿಗೆ ಮಾಲೀಕರಿಗೆ ಗಡುವು ನೀಡಿದ್ದಾರೆ.
7 ದಿನಗಳಲ್ಲಿ ತೆರವು:
ನಗರಸಭೆಗೆ ಸಂಬಂಧಿಸಿದ ಪಬ್ಲಿಕ್ ಕ್ಲಬ್ ಸೀಜ್ ಮಾಡಿದ ದಿನವೇ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ 7 ದಿನಗಳಲ್ಲಿ ತೆರವುಗೊಳಿಸ ಬೇಕೆಂದು ಸೂಚನೆ ನೀಡಿದ್ದಾರೆ. ನಗರದ 19ನೇ ವಾರ್ಡ್‌ನಲ್ಲಿ ಪಬ್ಲಿಕ್ ಕ್ಲಬ್ (ವಿಸ್ತೀರ್ಣ 54411.7855 ಚದುರ ಮೀಟರ್) ಆಸ್ತಿ ಇದ್ದು, ಇದು ನಗರಸಭೆಗೆ ಸಂಬಂಧಿಸಿದ್ದಾಗಿದೆ. ಈಗಾಗಲೇ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಆದೇಶ ನೀಡಿ ಪಬ್ಲಿಕ್ ಕ್ಲಬ್ ನವರು ಇರುವ ಆಸ್ತಿ ನಗರಸಭೆಗೆ ಸಂಬಂಧಿಸಿದ್ದು, ಕೂಡಲೆ ನಗರಸಭೆಗೆ ಸ್ವಾಧೀನ ಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ.ಈ ಆಸ್ತಿಯಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಿಕೊಂಡಿದ್ದೀರಿ. ಕಾರಣ ನೋಟಿಸ್ ನೀಡಿದ 7 ದಿನದೊಳಗೆ ತೆರವುಗೊಳಿಸಿಕೊಳ್ಳಬೇಕು. ತಪ್ಪಿದ್ದಲ್ಲ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ನೀಡಿದ ನೋಟಿಸ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಮಳಿಗೆ ನಿರ್ಮಿಸಿಕೊಂಡು ಲಕ್ಷಾಂತರ ಮುಂಗಡ ನೀಡಿದ ಅಂಗಡಿಗಳ ಮಾಲೀಕರು ಈಗ ಪರದಾಡುತ್ತಿದ್ದಾರೆ. ಮಳಿಗೆ ನಿರ್ಮಿಸಿಕೊಂಡವರು ಕ್ಲಬ್ ಗೆ ಮುಂಗಡ ಹಣ ಪಾವತಿಸಿದ್ದರು. ಈಗ ಮಳಿಗೆ ಖಾಲಿ ಮಾಡಿದರೆ ನಾವು ಪಾವತಿಸಿದ ಹಣಕ್ಕೆ ಯಾರು ಜವಾಬ್ದಾರಿ ಎಂದು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.