ಇಂಡಿ ತಾಲೂಕು ಬರಗಾಲವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಇಂಡಿ ಘಟಕ ಹಾಗೂ ರೈತ ಸಂಘದ ಕಾರ್ಯಕರ್ತರು ತಾಲೂಕಿನ ತಡವಲಗಾ ಬಳಿಯ ಜೋಡಗುಡಿ ಹತ್ತಿರ ವಿಜಯಪುರ-ಇಂಡಿ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಇಂಡಿ ತಾಲೂಕು ಬರಗಾಲವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಇಂಡಿ ಘಟಕ ಹಾಗೂ ರೈತ ಸಂಘದ ಕಾರ್ಯಕರ್ತರು ತಾಲೂಕಿನ ತಡವಲಗಾ ಬಳಿಯ ಜೋಡಗುಡಿ ಹತ್ತಿರ ವಿಜಯಪುರ-ಇಂಡಿ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.ಈ ವೇಳೆ ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು ಮಾತನಾಡಿ, ಜೂನ್ ತಿಂಗಳಿಂದ ಮಳೆ ಇಲ್ಲದೆ ರೈತರು ತೊಂದರೆಯಲ್ಲಿದ್ದಾರೆ. ಈಗಲೂ ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕೂಡಲೇ ಇಂಡಿ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರಾಂತ ರೈತ ಮುಖ್ಯಸ್ಥ ಗುರುನಾಥ ಬಗಲಿ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಬೇಕು. ತಾಲೂಕಿನಲ್ಲಿ ಕೆಲವೊಂದು ಕಾಲುವೆಗೆ ನೀರು ಬಿಡುತ್ತಿದ್ದು, ಕೆಲವು ಕೆರೆಗಳಿಗೆ ಬಿಡುತ್ತಿಲ್ಲ, ತಾರತಮ್ಯ ಮಾಡುವುದನ್ನು ನಿಲ್ಲಿಸಿ ಎಲ್ಲಾ ಕಾಲುವೆಗೆ ನೀರು ಹರಿಸಬೇಕು. ತಾಲೂಕಿನ ಕೊನೆಯ ಭಾಗದವರೆಗೂ ನೀರು ಹರಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟ ಉಪವಾಸ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದರು.ಮುಖಂಡ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ. ವಿದ್ಯುತ್ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಚಡಚಣದ ಶಾಂತಪ್ಪಗೌಡ ಬಿರಾದಾರ, ಈರಪ್ಪ ಗೊಡಿಹಾಳ, ಶರಣಪ್ಪ ತಾರಾಪುರ, ಶಂಕರೆಪ್ಪ ರೂಗಿ, ಸೋಮಶೇಖರ ಬ್ಯಾಳಿ, ಧರೆಪ್ಪ ತೇಲಿ, ಭೀಮಾಶಂಕರ ನಿಕ್ಕಂ, ಧರೆಪ್ಪ ತೇಲಿ, ಮಲ್ಲನಗೌಡ ಕಾಮಗೊಂಡ, ದಸ್ತಗೀರಸಾಬ ಬಾಗವಾನ, ಶಾಂತಪ್ಪ ಖಸ್ಕಿ, ಮಳಸಿದ್ದಪ್ಪ ಖಸ್ಕಿ ಮಾತನಾಡಿದರು.ಪ್ರತಿಭಟನೆಯಲ್ಲಿ ಗೌರಾಬಾಯಿ ಸುದಾಮ, ಜಯರಾಬಿ ನದಾಪ, ಲಕ್ಷ್ಮೀಬಾಯಿ ಕುಂಬಾರ, ಜಗದೇವಿ ಹೆಗಡ್ಯಾಳ ಮತ್ತಿತರಿದ್ದರು.
ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರಿಂದ ವಿಜಯಪುರ ಕಡೆ, ವಿಜಯಪುರದಿಂದ ಇಂಡಿ ಕಡೆಗೆ ಬರುವ ವಾಹನಗಳು ಎರಡು ಕಿ.ಮೀವರೆಗೆ ನಿಂತಿದ್ದವು. ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಹೆಸ್ಕಾಂ ಎಇಇ ಎಸ್.ಆರ್ ಮೆಂಡೆಗಾರ ಭೇಟಿ ನೀಡಿ ರೈತರ ಮನವೊಲಿಸಿದರು.ನಂತರ ಕೃಷ್ಣ ಮೇಲ್ದಂಡೆ ಯೋಜನೆಯ ಅಧಿಕ್ಷಕ ಅಭಿಯಂತರ ಗೋವಿಂದ ರಾಠೋಡ, ಶ್ರೀಮಂತ ಅಂಗಡಿ, ಅರವಿಂದ ಸೋಲಾಪುರ ಪ್ರತಿಭಟನಾಕಾರರ ಜತೆ ಮಾತನಾಡಿ ಭರವಸೆ ನೀಡಿದರಾದರೂ ರೈತರು ಧರಣಿ ಮುಂದುವರೆಸಿದರು.
ಸಿಪಿಐ ಸುನೀಲ ಪಾಟೀಲ ಪಿಎಸ್ ಐ ಗಳಾದ ಅನಿತಾ ರಾಠೋಡ, ರಾಜು ಮಮದಾಪುರ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.