ಕೃಷಿಕ್ರಾಂತಿ, ಹಸಿರು ಕ್ರಾಂತಿ ವೇಗದಲ್ಲೀಗ ಆಹಾರ ಉತ್ಪಾದನೆಯಾಗುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Sep 16, 2025, 01:00 AM IST
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕೃಷಿ ಮೇಳದ ಉದ್ಘಾಟನೆ ಸಮಯದಲ್ಲಿ ಮುಖ್ಯಮಂತ್ರಿಗಳು ಶ್ರೇಷ್ಟ ಕೃಷಿಕ ಪ್ರಶಸ್ತಿನೀಡಿ ಗೌರವಿಸಿದರು. | Kannada Prabha

ಸಾರಾಂಶ

ಕೃಷಿ ವಿವಿಗಳು ಲ್ಯಾಬ್ ಟು ಲ್ಯಾಂಡ್ ಜತೆಗೆ ಲ್ಯಾಂಡ್ ಟು ಲ್ಯಾಬ್ ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಧಾರವಾಡ: ಕೃಷಿ ಕ್ರಾಂತಿ- ಹಸಿರು ಕ್ರಾಂತಿಯ ವೇಗದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಆಹಾರ ಉತ್ಪಾದನೆಯಾಗುತ್ತಿಲ್ಲ. ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ ಸಂಶೋಧನೆ ನಡೆಸಿ ಜನಸಂಖ್ಯೆಗೆ ಅನುಗುಣವಾಗಿ ಕೃಷಿ ಉತ್ಪಾದನೆಗೆ ಪರಿಹಾರಗಳನ್ನು ಹುಡುಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷಿ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳವನ್ನು ಸೋಮವಾರ ಉದ್ಘಾಟಿಸಿ ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸ್ವಾತಂತ್ರ‍್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಹಸಿರು ಕ್ರಾಂತಿ ಫಲವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಮಣ್ಣಿನ ಆರೋಗ್ಯದ ಹಿನ್ನೆಲೆಯಲ್ಲಿ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ. ಇದನ್ನು ಕೃಷಿ ವಿವಿಗಳು ಗಂಭೀರವಾಗಿ ಪರಿಗಣಿಸಬೇಕು. ಜನಸಂಖ್ಯೆ ಬೆಳೆದ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ವಿವಿಗಳು ಲ್ಯಾಬ್ ಟು ಲ್ಯಾಂಡ್ ಜತೆಗೆ ಲ್ಯಾಂಡ್ ಟು ಲ್ಯಾಬ್ ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದ ಮುಖ್ಯಮಂತ್ರಿಗಳು, ಪ್ರತಿಯೊಬ್ಬರು ಪ್ರಗತಿಪರ ರೈತರಾಗಬೇಕು ಎಂದ ಅವರು, ಬೆಣ್ಣಿಹಳ್ಳಕ್ಕೆ ₹200ಕೋಟಿ ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಕೂಡ ಆರಂಭವಾಗಲಿದೆ ಎಂದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ವ್ಯವಸಾಯ ಮಾಡಿ, ಲಾಭ ತೋರಿಸಿಕೊಟ್ಟು, ಕೃಷಿ ಲಾಭದಾಯಕವಾಗಿದೆ ಎಂಬುದನ್ನು ರೈತರು ದೃಢಪಡಿಸಿದ್ದಾರೆ. ಪ್ರತಿ ವರ್ಷ ನಡೆಯುವ ಕೃಷಿಮೇಳ ರೈತರ ಜಾತ್ರೆ ಆಗಿದೆ. ಉತ್ತರ ಕರ್ನಾಟಕದ ರೈತರಿಗೆ ಹೊಸತನ್ನು ಈ ಕೃಷಿಮೇಳ ಪರಿಚಯಿಸುತ್ತಿದೆ ಎಂದರು.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಮಾತನಾಡಿ, ಕೃವಿವಿ ಸಂಶೋಧನೆಗಳಿಂದ ಇನ್ನೂ ಹೆಚ್ಚಿನ ಲಾಭ ಸಿಗಬೇಕು. ಇಳುವರಿ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ರಾಜ್ಯದಲ್ಲಿ ಸುಮಾರು ₹55 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಸುಮಾರು ₹83 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ. ಅಂದಾಜು ₹65 ಸಾವಿರ ಕೋಟಿಗಳ ಅನುದಾನವನ್ನು ಶಿಕ್ಷಣ ವಲಯಕ್ಕೆ ವೆಚ್ಚ ಮಾಡಲಾಗುತ್ತಿದೆ. ನೌಕರರ ವೇತನ ಮತ್ತು ಬಡವರಿಗೆ, ಅಂಗವಿಕಲರಿಗೆ, ವೃದ್ದಾಪ್ಯ ವೇತನ, ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ₹1.20 ಲಕ್ಷ ಕೋಟಿ ಅನುದಾನ ವೆಚ್ಚ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.ಧಾರವಾಡ ಡಿಸಿಗೆ ಅಭಿನಂದನೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮತ್ತು ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶಗಳ ಸಮೀಕ್ಷೆಯಲ್ಲಿ ಧಾರವಾಡ ಜಿಲ್ಲೆ ಮುಂಚೂಣಿಯಲ್ಲಿದ್ದು, ಕೃಷಿ ಮೇಳದ ಉದ್ಘಾಟನೆಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಉಸ್ತುವಾರಿ ಸಚಿವರನ್ನು ಅಭಿನಂದಿಸಿದರು.

ಎದ್ದು ಹೋದ ರೈತರು, ರೈತ ಮಹಿಳೆಯರು

ಕೃಷಿ ಮೇಳವನ್ನು ಉದ್ಘಾಟಿಸಲು ಮುಖ್ಯಮಂತ್ರಿಗಳು ಬರುತ್ತಾರೆಂದು ಅವರಿಗಾಗಿ ಕಾಯ್ದು ಕಾಯ್ದು ಸುಸ್ತಾಗಿ ಸಾಕಷ್ಟು ರೈತರು, ರೈತ ಮಹಿಳೆಯರು ಕಾರ್ಯಕ್ರಮದ ಮುಂಚಿತ ಹಾಗೂ ಮುಖ್ಯಮಂತ್ರಿಗಳ ಭಾಷಣದ ವೇಳೆಯೂ ಎದ್ದು ಹೋದ ಸಂದರ್ಭ ನಡೆಯಿತು. ಸೋಮವಾರ ಮಧ್ಯಾಹ್ನ 2.30ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ ಮೂರು ಗಂಟೆ ತಡವಾಗಿ ಸಂಜೆ 5.30ಕ್ಕೆ ಆರಂಭವಾಯ್ತು. ಹೀಗಾಗಿ ದೂರದ ಊರುಗಳಿಂದ ಬಂದ ರೈತರು, ಮಹಿಳೆಯರು ಮುಖ್ಯಮಂತ್ರಿಗಳು ಮಾತನಾಡುವಾಗಲೂ ಎದ್ದು ಹೋಗುತ್ತಿರುವುದು ಮುಖ್ಯಮಂತ್ರಿಗಳಿಗೆ ಮುಜುಗರ ತರಿಸಿತು. ಹೋಗುವವರು ಹೋಗಲಿ ಬಿಡಿ ಎಂದು ಪೊಲೀಸರಿಗೆ ಸ್ವತಃ ಮುಖ್ಯಮಂತ್ರಿಗಳು ಸೂಚನೆ ಸಹ ನೀಡಿದರು.

ರೈತರಿಗೆ ಸ್ಪಂದಿಸದ ಸಿಎಂ

ಮುಖ್ಯಮಂತ್ರಿಗಳು ಕೃಷಿ ಮೇಳಕ್ಕೆ ಬರುತ್ತಾರೆ, ನಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳೋಣ ಎಂದು ನೂರಾರು ರೈತರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರಿಗೆಲ್ಲಾ ತೀವ್ರ ನಿರಾಸೆಯಾಯಿತು. ಮುಖ್ಯಮಂತ್ರಿ ಭಾಷಣ ಮುಗಿಸುತ್ತಿದ್ದ ವೇಳೆ ರೈತರೊಬ್ಬರು ಎದ್ದು ನಿಂತು ಬೆಂಬಲ ಬೆಲೆ ಖರೀದಿ ಕೇಂದ್ರ, ಬೆಳೆಹಾನಿ ಬಗ್ಗೆ ಮಾತನಾಡಿದರು. ಆದರೆ, ಮುಖ್ಯಮಂತ್ರಿಗಳು ಅದಕ್ಕೆ ಉತ್ತರ ನೀಡದೇ ಭಾಷಣ ಮುಗಿಸಿ ಸಭೆಯಿಂದ ಹೊರನಡೆದಿದ್ದು ಸಾಕಷ್ಟು ರೈತರಿಗೆ ತೀವ್ರ ಬೇಸರ ಮೂಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ