ಭೂತಾಯಿಗೆ ಸಡಗರದಿಂದ ಉಡಿ ತುಂಬಿದ ಅನ್ನದಾತರು

KannadaprabhaNewsNetwork |  
Published : Dec 31, 2024, 01:02 AM IST
ಪೊಟೋ-ಯಳ್ಳು ಅಮವಾಸಿ ಹಬ್ಬದಲ್ಲಿ ಭೂತಾಯಿಗೆ ಉಡಿ ತುಂಬಿ ವಿವಿಧ ಭಕ್ಯ ಭೋಜ್ಯಗಳನ್ನು ಸವಿಯುತ್ತಿರುವ ಅನ್ನದಾತರು ಹಾಗೂ ಕುಟುಂಬ ವರ್ಗದವರು. | Kannada Prabha

ಸಾರಾಂಶ

ಲಕ್ಷಾಂತರ ಜೀವಿಗಳಿಗೆ ಅನ್ನ ಹಾಕಿ ಸಂಭ್ರಮಿಸುವ ಉದಾತ್ತ ಧ್ಯೇಯ ಇಲ್ಲಿ ಕಂಡು ಬರುತ್ತಿರುವುದು ಗಮನಾರ್ಹ ಸಂಗತಿ

ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಬೆಳೆಗಳ ಕೊಯ್ಲಿನ ಆರಂಭಕ್ಕೂ ಮೊದಲು ಬರುವ ಎಳ್ಳ ಅಮಾವಾಸ್ಯೆಯಂದು ಅನ್ನದಾತರು ಭೂತಾಯಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಿಸಿದ ದೃಶ್ಯ ಸೋಮವಾರ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಂಡು ಬಂದಿತು.

ಲಕ್ಷ್ಮೇಶ್ವರ ತಾಲೂಕಿನ ಕಪ್ಪು ಮಣ್ಣಿನ ಭೂಪ್ರದೇಶಗಳಾದ ಗೊಜನೂರ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ.

ಹಿಂಗಾರು ಹಂಗಾಮಿನಲ್ಲಿ ಕಡಲೆ,ಗೋಳ, ಗೋಧಿ ಹಾಗೂ ಕುಸುಬೆ ಬೆಳೆಗಳು ಕಾಳು ಕಟ್ಟುವ ಸಮಯದಲ್ಲಿ ಹಸಿರು ಸೀರೆ ಉಟ್ಟು ತುಂಬು ಗರ್ಭಣಿ ಸ್ತ್ರೀಯಂತೆ ಕಂಗೊಳಿಸುತ್ತಿರುವ ಭೂ ತಾಯಿಗೆ ಮಣ್ಣಿನ ಮಕ್ಕಳು ವಿವಿಧ ಬಗೆಯ ಭಕ್ಷ್ಯ ಬೋಜ್ಯಗಳನ್ನು ತಯಾರಿಸಿ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿ ಹುಲ್ಲಿಗೋ....ಸುರಂಭಳಿಗೋ ಎಂದು ಹೇಳುತ್ತ ತಾವು ನೈವೇದ್ಯ ಮಾಡಿದ ಪದಾರ್ಥಗಳ ಚರಗ ಚೆಲ್ಲುವ ಮೂಲಕ ಭೂತಾಯಿ ಮಡಿಲಲ್ಲಿ ಇರುವ ಲಕ್ಷಾಂತರ ಜೀವಿಗಳಿಗೆ ಅನ್ನ ಹಾಕಿ ಸಂಭ್ರಮಿಸುವ ಉದಾತ್ತ ಧ್ಯೇಯ ಇಲ್ಲಿ ಕಂಡು ಬರುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ವಿವಿಧ ಬಗೆಯ ಭಕ್ಷ್ಯಗಳು-ಎಳ್ಳು ಅಮಾವಾಸ್ಯೆ ಪೂಜೆಗೆ ವಿಶೇಷವಾಗಿ ತಯಾರಿಸುವ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಗೋಧಿ ಹುಗ್ಗಿ, ಕಡಬು, ಖರ್ಚಿಕಾಯಿ, ಯಣ್ಣಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಸಿಹಿ ತಿನಿಸುಗಳ ಜೊತೆಯಲ್ಲಿ ಕಡಕ್ ರೊಟ್ಟಿ. ಚಪಾತಿ, ಶೇಂಗಾ ಚಟ್ನಿ, ಕೆಂಪು ಖಾರದ ಹಿಂಡಿ, ಮೊಸರು, ಯಣಿಗಾಯಿ, ಹೆಸರು ಕಾಳು, ಮಡಿಕೆ ಕಾಳು ಪಲ್ಯ ಸೇರಿದಂತೆ ಮಿರ್ಚಿ ಬಜಿ ಹಾಗೂ ಅಕ್ಕಿ ಹುಗ್ಗಿ ಹಾಗೂ ಅನ್ನ ಸಾಂಬಾರು ತಯಾರಿಸಿಕೊಂಡು ಮನೆ ಮಂದಿಯಲ್ಲ ಸೇರಿ ಎತ್ತು ಚಕ್ಕಡಿ ಹೂಡಿಕೊಂಡು ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಬೀಗರು, ಸ್ನೇಹಿತರು ಹಾಗೂ ಆಳು ಹೋಳುಗಳೊಂದಿಗೆ ಹೊಲಕ್ಕೆ ಹೋಗಿ ಭೂತಾಯಿಗೆ ಉಡಿ ತುಂಬಿ ರುಚಿ ರುಚಿಯಾದ ಭೋಜನ ಸವಿಯುವ ಎಳ್ಳ ಅಮಾವಾಸ್ಯೆ ಹಬ್ಬವನ್ನು ಆಚರಿಸುವ ಪದ್ಧತಿ ಕಂಡು ಬರುತ್ತದೆ.

ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸುವ ಸಂಪ್ರದಾಯ ಕಂಡು ಬರುತ್ತದೆ. ರೈತರು ಅನ್ನ ನೀಡುವ ಭೂತಾಯಿಗೆ ಈ ಮೂಲಕ ನಮಿಸಿ ಸಂಭ್ರಮಿಸುವ ಕಾರ್ಯ ಮಾಡುತ್ತಿರುವುದು ನಮ್ಮ ಪಾರಂಪರಿಕ ಪದ್ಧತಿಯಾಗಿ ಕಂಡು ಬರುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ