- ಆಯ್ದ ಶಾಲೆಗಳ ಬಿಸಿಯೂಟದ ಪರೀಕ್ಷೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಧ್ಯಾಹ್ನ ಬಿಸಿಯೂಟದ ಯೋಜನೆಯಡಿ ಶಾಲಾ ಮಕ್ಕಳಿಗೆ ಉತ್ತಮ ಆಹಾರ ನೀಡಲು ಗುಣಮಟ್ಟ ಪರೀಕ್ಷಿಸಲಾಗುತ್ತದೆ ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಡಿ.ಎನ್. ಮಂಜುನಾಥ್ ತಿಳಿಸಿದರು.
ಶುಕ್ರವಾರ ತಾಪಂ ಆವರಣದಲ್ಲಿ ಬೆಂಗಳೂರಿನ ಅನಾಲಿಟಿಕಲ್ ರೀಸರ್ಚ್ ಸೆಂಟರ್ ಪ್ರೈ. ಲಿ. ನಿಂದ ತಾಲೂಕಿನ ಆಯ್ದ ಶಾಲೆಗಳ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವ ವೇಳೆ ಸುದ್ದಿಗಾರರಿಗೆ ಮಾಹಿತಿ ನೀಡಿ, ಸರ್ಕಾರದಿಂದ ಪ್ರತೀ ವರ್ಷವೂ ಮದ್ಯಾಹ್ನ ಬಿಸಿಯೂಟ ಯೋಜನೆಯ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ದೊರಕುತ್ತಿದೆಯೇ, ಇಲ್ಲವೇ ಎಂದು ಖಾತ್ರಿಯಾಗುತ್ತದೆ. ತಾಲೂಕಿನ ಎಲ್ಲಾ ಬಿಸಿಯೂಟ ಯೋಜನೆ ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಎಲ್ಲಾ ಅಡುಗೆ ಸಿಬ್ಬಂದಿಗೆ ಸೂಚಿಸಲಾಗಿದೆ. ಅಲ್ಲದೆ ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.ಬೆಂಗಳೂರಿನ ಅನಾಲಿಟಿಕಲ್ ರೀಸರ್ಚ್ ಸೆಂಟರ್ ಪ್ರೆö . ಲಿ. ಬ್ಯುಸಿನೆಸ್ ಡೆವೆಲಪ್‌ಮೆಂಟ್ ಆಫೀಸರ್ ಕೆ.ಆರ್. ವಿಜಯ್ ಶ್ರೀನಿವಾಸ್ ಮಾತನಾಡಿ, ನಮ್ಮ ಸೆಂಟರ್‌ನಿಂದ ಈಗಾಗಲೇ ಮೈಸೂರು, ಚಾಮರಾಜನಗರ,ಹಾಸನ, ದೇವನ ಹಳ್ಳಿ, ಹೊಸಕೋಟೆ,ತುಮಕೂರು,ನೆಲಮಂಗಲ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲೆಗಳ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗೆ ಬೆಂಗಳೂರಿನ ರೀಸರ್ಚ್ ಸೆಂಟರ್‌ಗೆ ಕಳುಹಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಸುಮಾರು 58 ಕ್ಕೂ ಹೆಚ್ಚು ಶಾಲೆಗಳ ಆಹಾರ ಪದಾರ್ಥಗಳನ್ನು ಶೇಖರಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಎನ್.ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಬಾಳೆಹೊನ್ನೂರಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಕಲ್ಲುಗುಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಎನ್.ಆರ್.ಪುರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸೇರಿ ನಾಲ್ಕು ಆಯ್ದ ಶಾಲೆಗಳ ಆಹಾರ ಪದಾರ್ಥ ಸಂಗ್ರಹಿಸಿದ್ದು ಇದರ ಗುಣಮಟ್ಟ ಪರೀಕ್ಷಿಸಿ ಸರ್ಕಾರಕ್ಕೆ ಹಾಗೂ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ನಾಲ್ಕು ಶಾಲೆಗಳ ಶಿಕ್ಷಕರು ಅಕ್ಷರ ದಾಸೋಹ ಸಿಬ್ಬಂದಿ ಸಂತೋಷ್,ಜಿಷ್ಮಾ ಇದ್ದರು.