ಭರದಿಂದ ಸಾಗಿದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

KannadaprabhaNewsNetwork |  
Published : May 09, 2026, 02:30 AM IST
ಕುಷ್ಟಗಿ ತಾಲೂಕಿನ ನಡುವಲಕೊಪ್ಪದಲ್ಲಿ ಜಾನುವಾರುಗಳಿಗೆ ದೋಟಿಹಾಳ ಪಶು ಚಿಕಿತ್ಸಾಲಯದ ಕಿರಿಯ ಪಶುವೈದ್ಯಕೀಯ ಪರೀಕ್ಷಕಿ ಚೈತ್ರಾ ಅಂಗಡಿ ಲಸಿಕೆ ಹಾಕಿದರು. | Kannada Prabha

ಸಾರಾಂಶ

ಏ. 23ರಿಂದ ಆರಂಭವಾಗಿರುವ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಮೇ 22ರ ವರೆಗೆ ನಡೆಯಲಿದ್ದು, ತಾಲೂಕಿನಲ್ಲಿ 63000 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನವು ತಾಲೂಕಿನಲ್ಲಿ ಭರದಿಂದ ಸಾಗಿದ್ದು, ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ, ಲಸಿಕೆದಾರರು ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತಿದ್ದಾರೆ.

ಏ. 23ರಿಂದ ಆರಂಭವಾಗಿರುವ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಮೇ 22ರ ವರೆಗೆ ನಡೆಯಲಿದ್ದು, ತಾಲೂಕಿನಲ್ಲಿ 63000 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 15000ಕ್ಕೂ ಅಧಿಕ ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ಈ ತಿಂಗಳಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಪ್ಪದೇ ಲಸಿಕೆ ಹಾಕಿಸಿ: ಕಾಲುಬಾಯಿ ರೋಗವು ವೈರಾಣುನಿಂದ ಬರುವ ಅಂಟುರೋಗವಾಗಿದೆ. ದನ, ಎಮ್ಮೆ, ಆಡು, ಕುರಿ, ಹಂದಿ, ಸೇರಿದಂತೆ ಎಲ್ಲ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ರೈತರಿಗೆ ಅಪಾರವಾದ ಆರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು, ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು, ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಲಸಿಕೆ ಹಾಕಿಸುವುದೊಂದೇ ಕಾಲುಬಾಯಿರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ.

ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿರುತ್ತದೆ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದರೂ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶು ಇಲಾಖೆಯ ವೈದ್ಯರು ತಿಳಿಸುತ್ತಾರೆ.

ರೋಗದ ಲಕ್ಷಣಗಳು: ರಾಸುಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ, ಜೊಲ್ಲು ಸುರಿಯುವುದು, ನಾಲಗೆಯಲ್ಲಿ ಹುಣ್ಣಾಗಿ ಮೇಲ್ಪದರವೇ ಕಿತ್ತು ಬರುವುದು, ಕಾಲಿನ ಗೊರಸಿನ ಮಧ್ಯೆ ಹುಣ್ಣು, ಹಾಲಿನ ಉತ್ಪಾದನೆ ಕ್ಷೀಣ ಇವು ರೋಗದ ಲಕ್ಷಣಗಳು.

ಕುಷ್ಟಗಿ ತಾಲೂಕಿನ ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ಜಾನುವಾರುಗಳಿಗೆ ಲಸಿಕೆ ಕಾರ್ಯ ಭರದಿಂದ ನಡೆದಿದೆ. 63 ಸಾವಿರ ಗುರಿ ಹೊಂದಿರುವ ಪೈಕಿ ಈಗಾಗಲೆ 15 ಸಾವಿರಕ್ಕೂ ಅಧಿಕ ಜಾನುವಾರುಗಳಿಕೆ ಕಾಲುಬಾಯಿ ರೋಗ ಲಸಿಕೆ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಜಾನುವಾರು ಮಾಲೀಕರಿಗೆ ಒಟಿಪಿ ವೇರಿಫಿಕೇಷನ್ ಮಾಡುವ ವ್ಯವಸ್ಥೆ ಜಾರಿಯಾಗಿದೆ. ಸಿಬ್ಬಂದಿ ಮನೆಗೆ ಬಂದಾಗ ತಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ನೀಡಿ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಆನಂದ ದೇವರನಾವದಗಿ ತಿಳಿಸಿದ್ದಾರೆ.

ಭಾರತ್ ಪಶುಧನ್ ವೆಬ್‌ಸೈಟ್‌ನಲ್ಲಿ ನೋಂದಣಿ ಆಗಿರುವ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದ್ದು, ಈಗಾಗಲೆ ಲಸಿಕೆ ಹಾಕುವ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬೆಳಗ್ಗೆ ಮತ್ತು ಸಾಯಂಕಾಲ ಸಮಯದಲ್ಲಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದ್ದು, ರೈತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ದೋಟಿಹಾಳ ಪಶು ಚಿಕಿತ್ಸಾಲಯ ಕಿರಿಯ ಪಶುವೈದ್ಯಕೀಯ ಪರೀಕ್ಷಕಿ ಚೈತ್ರಾ ಅಂಗಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗತ್ತಿನೆಲ್ಲೆಡೆ ರೆಡ್ ಕ್ರಾಸ್ ಸೇವೆ ಅನನ್ಯ: ಡಾ. ಅಶೋಕ್
ಮಾಹೆ ಎಂಐಟಿಗೆ ಸಿಎಫ್‌ಎ ಇನ್‌ಸ್ಟಿಟ್ಯೂಟ್ ಮಾನ್ಯತೆ