ಎಸ್.ಜಿ. ತೆಗ್ಗಿನಮನಿನರಗುಂದ: ಜಿಲ್ಲೆಯಲ್ಲಿ ಹೆಚ್ಚು ನೀರಾವರಿ ಕೃಷಿ ಹೊಂದಿರುವ ತಾಲೂಕಿನ ಮಲಪ್ರಭಾ ಜಲಾಶಯದ ಮುಖ್ಯ ಕಾಲುವೆಗಳಲ್ಲಿ ಜಾಲಿ ಕಂಟಿ ಬೆಳೆದು ಹೂಳು ತುಂಬಿದ್ದು, ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.ಈ ಮೊದಲು ನರಗುಂದ, ಸವದತ್ತಿ, ಬಾದಾಮಿ, ರಾಮದುರ್ಗ, ರೋಣ ತಾಲೂಕಿನ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಮುಖ್ಯ ಕಾಲುವೆಗಳನ್ನು ಸರ್ಕಾರದಿಂದ ಬಂದ ಅನುದಾನದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸುತ್ತಿದ್ದರು.
ಪ್ರತಿವರ್ಷ ತಾಲೂಕಿನ ರೈತರು ಚಿಕ್ಕ ನರಗುಂದದಿಂದ ಕೊಣ್ಣೂರು ಗ್ರಾಮದವರೆಗೆ 40 ಕಿಮೀ ಜಮೀನುಗಳಿಗೆ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶ ಜಮೀನುಗಳಿಗೆ ನೀರು ಪೂರೈಸುವ ಮುಖ್ಯ ಕಾಲುವೆಯ ಹೂಳು ಮತ್ತು ಜಾಲಿ ಕಂಟಿ ಸ್ವಚ್ಛ ಮಾಡಿ ಜಮೀನುಗಳಿಗೆ ಸರಾಗವಾಗಿ ನೀರು ಮುಟ್ಟಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ರೈತ ಸಂಘಟನೆಗಳು ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕಾಲುವೆ ಸ್ವಚ್ಛಗೊಳಿಸಲು ಹಣ ನೀಡುತ್ತಿಲ್ಲವೆಂಬುದು ರೈತರ ಆರೋಪ.ಸರ್ಕಾರ ವಹಿಸಿಕೊಳ್ಳಲಿ: ಸರ್ಕಾರ ನೀರಾವರಿ ನಿಗಮ ರದ್ದು ಮಾಡಿ ಮೊದಲಿನಂತೆ ಕಾಲುವೆ ನಿರ್ವಹಣೆ ಮಾಡಬೇಕು. ಕಾಲುವೆಗಳನ್ನು ಅಧಿಕಾರಿಗಳ ಮೂಲಕ ಸ್ವಚ್ಛ ಮಾಡಿಸಿ ಎಲ್ಲ ರೈತರ ಜಮೀನುಗಳಿಗೆ ನೀರು ಮುಟ್ಟಿಸುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಹದಾಯಿ ಹೋರಾಟ ವೇದಿಕೆಯ ಅಧ್ಯಕ್ಷ ವೀರಬಸಪ್ಪ ಹೂಗಾರ ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಚಿಕ್ಕನರಗುಂದದಿಂದ ಕೊಣ್ಣೂರಿನವರೆಗೆ 40 ಕಿಮೀ ಮುಖ್ಯ ಕಾಲುವೆ ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಕಾಲುವೆ ಸ್ವಚ್ಛಗೊಳಿಸಲಾಗುವುದು ಎಂದು ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೆಂಕನಗೌಡ ಪಾಟೀಲ ತಿಳಿಸಿದರು.