ಏಕನಾಥ ಜಿ ಮೆದಿಕೇರಿ ಹನುಮಸಾಗರ
ಫುಟ್‌ಪಾತ್‌ಗಳು ವ್ಯಾಪಾರ ಮಳಿಗೆ, ತಾತ್ಕಾಲಿಕ ಗೂಡಂಗಡಿ ಹಾಗೂ ಖಾಸಗಿ ವಾಹನಗಳ ನಿಲುಗಡೆ ಕೇಂದ್ರಗಳಾಗಿ ಮಾರ್ಪಟ್ಟಿರುವ ಪರಿಣಾಮ ಸಾರ್ವಜನಿಕರು ನಡುರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹೃದಯ ಭಾಗವಾಗಿರುವ ಹಳೆ ಬಸ್ ನಿಲ್ದಾಣದ ಸ್ವಾಮಿವಿವೇಕಾನಂದ ವೃತ್ತದಿಂದ ಆರಂಭವಾಗಿ ಹಳೆ ಮಾರುಕಟ್ಟೆ, ಪಪಂ ಕಚೇರಿ, ಗೂಳಿ ಬಸವೇಶ್ವರ ವೃತ್ತ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಎರಡೂ ಬದಿಯ ಫುಟ್‌ಪಾತ್ ಸಂಪೂರ್ಣ ಅತಿಕ್ರಮಣಕ್ಕೊಳಗಾಗಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಯಾಣಿಕರ ಪರದಾಟ:ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲ. ಬಸ್ ಬಂದಾಗ ಪ್ರಯಾಣಿಕರು ನೇರವಾಗಿ ರಸ್ತೆಯಲ್ಲೇ ನಿಂತು ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಖಾಸಗಿ ವಾಹನ, ಆಟೋ ಹಾಗೂ ಇತರ ವಾಹನ ನಿಲುಗಡೆಯಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ಎರಡು ಬಸ್ ಮುಖಾಮುಖಿಯಾಗಿ ಬಂದರೆ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು, ಪಾದಚಾರಿಗಳು ವಾಹನಗಳ ಮಧ್ಯೆ ಜೀವ ಭಯದಿಂದ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಫುಟ್‌ಪಾತ್ ಮೇಲೆಯೇ ವ್ಯಾಪಾರ: ಪಟ್ಟಣದ ಹಲವು ಪ್ರಮುಖ ರಸ್ತೆಗಳ ಫುಟ್‌ಪಾತ್ ಮೇಲೆಯೇ ತಾತ್ಕಾಲಿಕ ಗೂಡಂಗಡಿ ನಿರ್ಮಿಸಿ ವ್ಯಾಪಾರ ನಡೆಸಲಾಗುತ್ತಿದೆ. ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಫುಟ್‌ಪಾತ್‌ನಿಂದ ರಸ್ತೆಯವರೆಗೂ ವಿಸ್ತರಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಅಂಗಡಿಗಳ ಮುಂದೆ ಖಾಸಗಿ ವಾಹನ ನಿಲ್ಲಿಸುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಪಪಂ ಆಗಿ ಮೇಲ್ದರ್ಜೆಗೇರಿರುವ ಹನುಮಸಾಗರದಲ್ಲಿ ಸುಸಜ್ಜಿತ ಫುಟ್‌ಪಾತ್, ವಾಹನ ನಿಲುಗಡೆ, ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ಸಂಕೀರ್ಣ ಹಾಗೂ ವಾರದ ಸಂತೆಗೆ ಶಾಶ್ವತ ಸ್ಥಳ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅತಿಕ್ರಮಣ ತೆರವು ಕಾರ್ಯ ನಿಯಮಿತವಾಗಿ ಕೈಗೊಂಡು ಪಾದಚಾರಿಗಳಿಗೆ ಸುರಕ್ಷಿತ ಸಂಚಾರದ ವಾತಾವರಣ ಕಲ್ಪಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಅತಿಕ್ರಮಣಕ್ಕೊಳಗಾಗಿರುವ ಫುಟ್‌ಪಾತ್ ಹಾಗೂ ರಸ್ತೆ ಮೇಲಿನ ಗೂಡಂಗಡಿಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುವುದು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ, ಫುಟ್‌ಪಾತ್ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹನುಮಸಾಗರ ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದ್ದಾರೆ.