ನಿಜ ಚರಿತ್ರೆಗಾಗಿ ಪುರಾಣ ಆಧರಿಸದೇ ವಚನ ಆಧರಿಸಿ: ಚನ್ನಪ್ಪ ಕಟ್ಟಿ

KannadaprabhaNewsNetwork |  
Published : Nov 30, 2026, 03:15 AM IST
ಧಾರವಾಡದಲ್ಲಿ  ನಡೆದ ಎಂ.ಎಂ.ಕಲಬುರ್ಗಿ ಜನ್ಮದಿನೋತ್ಸವದಲ್ಲಿ ಲಕ್ಷ್ಮಣ ತೆಲಗಾವಿ ಹಾಗೂ  ಬಸವರಾಜ ಜೆ. ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ವಚನಕಾರರ, ಶರಣರ ನಿಜ ಚರಿತ್ರೆಗಳನ್ನು ವಚನಗಳಲ್ಲಿ ಹುಡುಕಬೇಕು. ಪುರಾಣದಲ್ಲಿ ಅಲ್ಲ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಧಾರವಾಡ

ವಚನಕಾರರ, ಶರಣರ ನಿಜ ಚರಿತ್ರೆಗಳನ್ನು ವಚನಗಳಲ್ಲಿ ಹುಡುಕಬೇಕು. ಪುರಾಣದಲ್ಲಿ ಅಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ಡಾ. ಎಂ.ಎಂ.ಕಲಬುರ್ಗಿ ಟ್ರಸ್ಟ್ ವತಿಯಿಂದ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಎಂ.ಎಂ.ಕಲಬುರ್ಗಿ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿ, ಪುರಾಣದ ಒಂದು ಸಾಲು ಆಧರಿಸಿ ಬಸವಣ್ಣನವರನ್ನು ಕೊಲೆಗಾರ ಎಂದು ಪ್ರತಿಪಾದಿಸುವ ಯತ್ನದಲ್ಲಿ ಕೆಲವರು ತೊಡಗಿದ್ದಾರೆ. ಅವರು ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಚರಿತ್ರೆ ಹುಡುಕುವ ಸಂಶೋಧನೆಗಳಲ್ಲಿ ಕಟ್ಟುವ ಮತ್ತು ಕೆಡವುವ ಧಾರೆಗಳು ಪ್ರಮುಖವಾಗಿ ಕಾಣಿಸುತ್ತಿವೆ. ಕೆಲವರು ಕೆಡುವವ ಕೆಲಸ ಮಾಡುತ್ತಿದ್ದು, ಸಂಶೋಧನೆ ಹೆಸರಿನಲ್ಲಿ ಧ್ವಂಸ ಮಾಡುವ ಅಪಾಯಕಾರಿ ನಿಲು‌ವುಗಳ ಸಂದರ್ಭದಲ್ಲಿ ನಾವಿದ್ದೇವೆ. ಆದರೆ, ಪ್ರೊ.ಎಂ.ಎಂ.ಕಲಬುರ್ಗಿ ಅವರು ಸಂಶೋಧನೆ ಮೂಲಕ ಕಟ್ಟುವ ಕೆಲಸ ಮಾಡಿದ್ದರು. ಅವರು ಸತ್ಯಶೋಧದ ಕೆಲಸ ಮಾಡಿದರು. ಕೆಡುವುವ ಸಂಸ್ಖೃತಿ ಅವರದಲ್ಲ. ಸತ್ಯ ಎಂದು ನಂಬಿದ್ದ ವಿಷಯ ಸತ್ಯವಲ್ಲ ಎಂದು ತಿಳಿದಾಗ ಅದನ್ನು ಒಪ್ಪಿಕೊಳ್ಳುತ್ತಿದ್ದರು ಎಂದರು.

ಸತ್ಯಶೋಧನೆಯೇ ಸಂಶೋಧನೆಯ ಅಂತಿಮ ಗುರಿ. ಹಿತಾಸಕ್ತಿಗೆ ತುತ್ತಾಗಿ ಧ್ವಂಸ ಮಾಡುವ ಕೆಲಸ ಮಾಡಬಾರದು. ಎಂ.ಎಂ.ಕಲಬುರ್ಗಿ ಅವರ ಕೃತಿಗಳು ಸಂಶೋಧನೆಗೆ ಮಾರ್ಗಸೂಚಿಗಳು ಎಂದರು.

ಪ್ರಶಸ್ತಿ ಪ್ರದಾನ..

ಚಿತ್ರದುರ್ಗದ ಸಂಶೋಧಕ ಲಕ್ಷ್ಮಣ ತೆಲಗಾವಿ ಅವರಿಗೆ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ, ಯಾದಗಿರಿ ಜಿಲ್ಲೆ ಕೆಂಭಾವಿಯ ಸಂಗೀತ ಕಲಾವಿದ ಬಸವರಾಜ ಜೆ. ಪೂಜಾರಿ ಅವರಿಗೆ ರಾಷ್ಟ್ರೀಯ ವಚನ ಸಂಗೀತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಸಂಶೋಧಕ ಲಕ್ಷ್ಮಣ ತೆಲಗಾವಿ ಮಾತನಾಡಿ, ಸಂಶೋಧನಾ ಲೋಕದಲ್ಲಿ ಹೊಸ ಪ್ರಯತ್ನ, ಉತ್ಸಾಹ ಕಂಡುಬರುತ್ತಿಲ್ಲ. ಹೊಸ ಸಂಶೋಧನೆಗಳಿಗೆ ಆದ್ಯತೆ ಇದೆ. ಆದರೆ, ಪ್ರಯತ್ನ ಪಡುವವರು ಇಲ್ಲ. ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳು ಲಭ್ಯ ಇಲ್ಲ. ಸರ್ಕಾರ ಐದು ವರ್ಷಗಳಿಂದ ಹೊಸ ಪ್ರಕಟಣೆಗಳನ್ನು ಖರೀದಿಸಿಲ್ಲ. ಸಾಹಿತ್ಯ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ಸಂಶೋಧಕರು ಅಧ್ಯಯನ ಮಾಡಲು ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರ ಕನ್ನಡ ಸಂಶೋಧನ ಮಾರ್ಗ ಸಂಪುಟ 3 ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ಅಧ್ಯಕ್ಷ ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ ಕಲಬುರ್ಗಿ, ಟ್ರಸ್ಟ್ ಸದಸ್ಯರಾದ ಶ್ರೀವಿಜಯ ಕಲಬುರ್ಗಿ, ಸಿದ್ದನಗೌಡ ಪಾಟೀಲ, ಚಂದ್ರಶೇಖರ ವಸ್ತ್ರದ, ಎಚ್.ಎಸ್.ಮೇಲಿನಮನಿ, ಶಶಿಧರ ತೊಡಕರ, ಹನುಮಾಕ್ಷಿ ಗೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಂಡಾ ಕಾಯ್ದೆಯಡಿ ಇಬ್ಬರು ರೌಡಿಗಳ ಬಂಧನ
ಅಪಘಾತದಲ್ಲಿ ಗಾಯಗೊಂಡ ಯುವಕ ಸಾವು