ಕನ್ನಡಪ್ರಭ ವಾರ್ತೆ ನಂಜನಗೂಡು ಅಂಗನವಾಡಿ ಕಾರ್ಯಕರ್ತೆಯರ ಮಹಿಳಾ ಮತ್ತು ಮಕ್ಕಳ ದೈನಂದಿನ ಸೇವಾ ಕಾರ್ಯಗಳಿಗೆ ನೆರವಾಗುವಂತೆ ನಂಜನಗೂಡು ಮತ್ತು ಬಿಳಿಗೆರೆ ವ್ಯಾಪ್ತಿಯ 400 ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ವಿತರಣೆ ನಡೆಸಿದ ನಂತರ ಅವರು ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ, ಕಾರ್ಯಕರ್ತೆಯರ ಬೇಡಿಕೆಯಂತೆ ಗ್ರಾಜ್ಯೂಟಿ ಸೌಲಭ್ಯ ನೀಡಲು ಸರ್ಕಾರ ಕ್ರಮ ವಹಿಸಿದೆ, ಅಂಗನವಾಡಿ ಕೇಂದ್ರಗಳನ್ನು ಉನ್ನತಿಕರಿಸಲು ಹಾಗೂ ಕೇಂದ್ರಗಳಲ್ಲಿ ಮಕ್ಕಳಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ, ಸ್ಮಾರ್ಟ್ ಪೋನ್ ಬಳಸಿಕೊಂಡು ಇನ್ನಷ್ಟು ಸೇವಾ ಕಾರ್ಯಗಳಿಗೆ ನೆರವಾಗಬೇಕು ಎಂದು ಹೇಳಿದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಹೊಸ ತಂತ್ರಜ್ಞಾನಗಳಿಗೆ ಕಾರ್ಯಕರ್ತೆಯರು ತೆರೆದುಕೊಂಡು, ಸೇವಾ ಕಾರ್ಯದಲ್ಲಿ ಉನ್ನತಿ ಸಾಧಿಸಲಿ ಎಂಬ ಆಶಯದಿಂದ, ಪ್ರತಿ ಕಾರ್ಯಕರ್ತೆಯರಿಗೆ 12.5 ಸಾವಿರ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ವಿತರಣೆ ಮಾಡಲಾಗಿದೆ, ನಿಮ್ಮ ದಿನ ನಿತ್ಯದ ಕಚೇರಿ ಕಾರ್ಯಗಳನ್ನು ಸುಲಭಗೊಳಿಸುವಲ್ಲಿ ಪೋನ್ ಗಳು ನೆರವಿಗೆ ಬರುತ್ತವೆ, ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದ ಕಿರಿಯ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಅಂಗನವಾಡಿ ಕಾರ್ಯಕರ್ತೆಯರ ನೆರವಿಗೆ ಬದ್ದನಾಗಿದ್ದೇನೆ ಎಂದು ಹೇಳಿದರು.ತಹಸೀಲ್ದಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಎಚ್.ಆರ್. ಸುರೇಶ್, ಶಿವಕುಮಾರ್ ಕಾಸ್ನೂರ್, ತಾಪಂ ಇಒ ಜೆರಾಲ್ಡ್ ರಾಜೇಶ್, ಎಚ್.ಸಿ. ಬಸವರಾಜ್, ಹಾಡ್ಯ ರಂಗಸ್ವಾಮಿ, ಸಿ.ಎಂ. ಶಂಕರ್, ಕೆ.ಎಂ. ಬಸವರಾಜು, ಸಿಡಿಪಿಒಗಳಾದ ಮಂಜುಳ, ಭವ್ಯಶ್ರೀ ಇದ್ದರು.