ಸೊರಬ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಸಾಗರ ಉಪ ವಿಭಾಗಾಧಿಕಾರಿ ಆರ್.ಯತೀಶ್ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಆಡಳಿತ ಮಂಡಳಿ ಕಚೇರಿಯಲ್ಲಿ ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಾ.೫ ರಿಂದ ೧೦ ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.೮ ರಂದು ಶ್ರೀ ದೇವಿಯ ಮಹಾ ರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವಕ್ಕೆ ಬರುವಂತಹ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ನೆರಳಿಗೆ ಶಾಮಿಯಾನ, ಶೌಚ ಗೃಹಗಳು, ವಾಹನ ಪಾರ್ಕಿಂಗ್ ವ್ಯವಸ್ಥೆ, ಸೇರಿದಂತೆ ಭಕ್ತರಿಗೆ ಅನುಕೂಲ ವಾಗುವಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ರಕ್ಷಣಾ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಇಲಾಖೆಯಿಂದ ಆರೋಗ್ಯ ಕೇಂದ್ರಗಳು ತೆರೆಯಬೇಕು. ಗ್ರಾಮದಲ್ಲಿ ಅಗತ್ಯವಾಗಿರುವಲ್ಲಿ ದೀಪಾಲಂಕಾರ ಮಾಡಬೇಕು ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು. ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್ ಮಾತನಾಡಿ, ಕ್ಷೇತ್ರಕ್ಕೆ ಬರುವ ಭಕ್ತರಿಗೆ ನಿರಂತರವಾಗಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಜೊತೆಗೆ ವ್ಯವಸ್ಥಿತವಾದ ಶೌಚಗೃಹಗಳನ್ನು ನಿರ್ಮಿಸಬೇಕೆಂದು ತಿಳಿಸಿದರು. ಶ್ರೀ ರೇಣುಕಾಂಬ ಕಲ್ಯಾಣ ಮಂಟಪಕ್ಕೆ ಸುಣ್ಣಬಣ್ಣ ಮಾಡಬೇಕು ಹಾಗೂ ಜಾತ್ರೆಯಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.ಪ್ರಬೇಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೇಸ್ವಾಲ್, ತಾಲೂಕು ದಂಡಾಧಿಕಾರಿ ಮಂಜುಳ ಹೆಗಡಾಳ್, ಗ್ರಾಪಂ ಅಧ್ಯಕ್ಷೆ ಸರಿತಾ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ, ತಾಪಂ ಮಾಜಿ ಸದಸ್ಯ ಎಚ್. ಗಣಪತಿ ಹುಲ್ತಿಕೊಪ್ಪ ಮತ್ತಿತರರಿದ್ದರು.