ಜನಾನುರಾಗಿ ಧರ್ಮಸಿಂಗ್‌ಗೆ ಜನರ ಸೇವೆಯೇ ಕಾಯಕ

KannadaprabhaNewsNetwork |  
Published : Dec 25, 2025, 02:00 AM IST
23ಕೆಎಂಎನ್ ಡಿ26 | Kannada Prabha

ಸಾರಾಂಶ

ಧರಂಸಿಂಗ್ ಅವರ ಹುಟ್ಟುಹಬ್ಬದ ನಿಮಿತ್ತ ಜೇವರ್ಗಿಯಲ್ಲಿ ಡಿ.25ರ ಗುರುವಾರ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶೇಷಮೂರ್ತಿ ಅವಧಾನಿ

ಅಜಾತ ಶತ್ರು ಎಂದೇ ಹೆಸರುವಾಸಿಯಾಗಿದ್ದ, ರಾಜ್ಯ ಕಂಡ ‘ಬಡವರ’ ಮುಖ್ಯಮಂತ್ರಿ ದಿವಂಗತ ಡಾ। ಎನ್.ಧರಂಸಿಂಗ್ ಅವರು ಇಂದು ನಮ್ಮೆಲ್ಲರೊಂದಿಗೆ ಬದುಕಿದ್ದರೆ ಇಂದು ತಮ್ಮ 89ನೇ ಹುಟ್ಟುಹಬ್ಬ ಆಚರಿಸುತ್ತಿದ್ದರು.

ಎಲ್ಲಾ ರಾಜಕಾರಣಿಗಳಂತಲ್ಲ ಧರಂಸಿಂಗ್ ಅವರ ರಾಜಕೀಯ ಬದುಕು. ಅವರ ರಾಜಕೀಯ ಜೀವನ ಬಲು ರೋಚಕ, ಜನಪರ ಹಾಗೂ ರಂಗು ರಂಗಿನದ್ದು ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಹಿಂದಿ ಶಿಕ್ಷಕ ವೃತ್ತಿಯ ಜೊತೆಗೇ ವಕೀಲರಾಗಿದ್ದ ಧರಂಸಿಂಗ್, 1972ರಲ್ಲಿ ಜೇವರ್ಗಿ ಅಸೆಂಬ್ಲಿಯಿಂದ ಸ್ಪರ್ಧಿಸಿ ಗೆದ್ದವರು, ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಗೆಲ್ಲುತ್ತಲೇ ಜನಾನುರಾಗಿ ಜನನಾಯಕರಾಗಿ ಸರ್ವರನ್ನು ಆವರಿಸಿದವರು.

ನೆಲೋಗಿಯ ಜನನಾಯಕ:

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಅವರ ಹುಟ್ಟೂರು. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣವನ್ನು ಕಲಬುರಗಿಯಲ್ಲಿ ಮುಗಿಸಿ ನಂತರ ಹೈದರಾಬಾದ್‌ನಲ್ಲಿ ಉನ್ನತ ಕಾನೂನು ಪದವಿ ಪಡೆದು ಕಲಬುರಗಿಯಲ್ಲೇ ವಕೀಲರಾಗಿ ಸೇವೆ ಸಲ್ಲಿಸಿದವರು.

ಕಾಂಗ್ರೆಸ್‌ನಲ್ಲಿ ದಿ.ಇಂದಿರಾ ಗಾಂಧಿಯವರಿಗೆ ಬಲು ಹತ್ತಿರದವರಾಗಿದ್ದ ಧರಂಸಿಂಗ್, 1972ರಲ್ಲಿ ಜೇವರ್ಗಿಯಿಂದ ಅಸೆಂಬ್ಲಿ ಕಣಕ್ಕಿಳಿದು ಗೆಲ್ಲುವುದರೊಂದಿಗೆ ಸತತ 11 ಬಾರಿ ಗೆಲ್ಲುತ್ತಲೇ ನಡೆದರು. ಇದರಿಂದಾಗಿ ಅವರನ್ನು ಗೆಲ್ಲುವ ಕುದುರೆ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಧರಂಸಿಂಗ್ ತಮ್ಮ ರಾಜಕೀಯ ಬದುಕಲ್ಲಿ ಎದುರಿಸಿದ 13 ಸಾರ್ವತ್ರಿಕ ಚುನಾವಣೆಯಲ್ಲಿ 11 ಬಾರಿ ಗೆಲುವು ಸಾಧಿಸಿದವರು. 1972ರ ಪ್ರಥಮ ಚುನಾವಣೆಯಿಂದ 10 ಚುನಾವಣೆವರೆಗೆ ಸತತ ಜೇವರ್ಗಿಯಿಂದಲೇ ಗೆಲುವು ಸಾಧಿಸಿ ಜನಮನ ಗೆದ್ದವರು.

ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ, ನಿರಂತರ 8 ಬಾರಿ ಜೇವರ್ಗಿ ಶಾಸಕರಾಗಿ, ಕಲಬುರಗಿ, ಬೀದರ್ ಸಂಸದರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಧರಂಸಿಂಗ್, ಸಚಿವರಾಗಿ ಗೃಹ, ಲೋಕೋಪಯೋಗಿ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದವರು.

ಧರಂಸಿಂಗ್ ಸಾಧನೆ ಮೈಲಿಗಲ್ಲುಗಳು:

ಕಲ್ಯಾಣ ನಾಡಿಗೆ ಒಲಿದು ಬಂದಿರುವ ಸಂವಿಧಾನದ ಕಲಂ 371ನೇ ಅನುಚ್ಚೇದದ ರೂವಾರಿಗಳೂ ಆಗಿದ್ದರು. ಈ ಭಾಗದ ಹಿಂದುಳಿದಿರುವಿಕೆ ಹೋಗಲಾಡಿಸಲು ತಾವೇ ಅಧ್ಯಯನ ಮಾಡಿ ನೀಡಿದ್ದ ವರದಿಯಿಂದಲೇ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿ ಇದೀಗ ಅದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಅಸ್ತಿತ್ವದಲ್ಲಿದೆ. ಇದಲ್ಲದೆ, ಕಲಬುರಗಿಗೆ ಹೈಕೋರ್ಟ್ ಪೀಠ ಬರುವಲ್ಲಿ, ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಧರಂಸಿಂಗ್ ಪಾತ್ರ ಹಿರಿದು.

ರಾಜಕೀಯದಲ್ಲಿ ಹಲವಾರು ಮಜಲುಗಳನ್ನು ಹತ್ತಿ ಜನಪರ ಕೆಲಸಗಳಿಗೆ ಚಾಲನೆ ನೀಡಿದ ಧರಂಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ ಧರಂಸಿಂಗ್ ಅವರೂ ಪತಿಯೊಂದಿಗೆ ಸಾಧನೆಯ ದಾರಿಯಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದವರು. ಇವರ ಪುತ್ರ ಡಾ। ಅಜಯ್ ಸಿಂಗ್ ತಂದೆಯ ಉತ್ತರಾಧಿಕಾರಿಯಾಗಿ ಜೇವರ್ಗಿ ಶಾಸಕರಾಗಿದ್ದು, ಇದೀಗ ಸದನದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು. ಇನ್ನೋರ್ವ ಪುತ್ರ ವಿಜಯ ಸಿಂಗ್ ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದವರು.

ಧರಂಸಿಂಗ್ ಸ್ಮಾರಕ:

ಧರಂಸಿಂಗ್ ಅವರ ಹುಟ್ಟುಹಬ್ಬದ ನಿಮಿತ್ತ ಜೇವರ್ಗಿಯಲ್ಲಿ ಡಿ.25ರ ಗುರುವಾರ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವರ ಪುತ್ರ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್, ಮಾಜಿ ಎಂಎಲ್‍ಸಿ ವಿಜಯ್ ಸಿಂಗ್, ಪುತ್ರಿ ಪ್ರಿಯದರ್ಶಿನಿ ಚಂದ್ರಾಸಿಂಗ್, ಪತ್ನಿ ಪ್ರಭಾವತಿ ಧರಂಸಿಂಗ್, ಜೇವರ್ಗಿಯಲ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಿದ್ದಾರೆ, ಜೊತೆಗೆ, ಜೇವರ್ಗಿಯಲ್ಲೇ ಧರಂಸಿಂಗ್‌ ಅವರ ಬದುಕಿನ ಘಟನಾವಳಿ ಸಾರುವ ಮ್ಯೂಸಿಯಂ ಸ್ಥಾಪಿಸುವ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಕಲಬುರಗಿ-ಜೇವರ್ಗಿ ಹೆದ್ದಾರಿಗೆ ಹೊಂದಿಕೊಂಡಿರುವ, ಕಟ್ಟಿ ಸಂಗಾವಿ ಹತ್ತಿರ ತಲೆ ಎತ್ತಿರುವ ಧರಂಸಿಂಗ್ ಸ್ಮಾರಕ ತಾಯಿ- ಮಕ್ಕಳ ಆಸ್ಪತ್ರೆಗೆ ಧರಂಸಿಂಗ್ ಫೌಂಡೇಶನ್‍ನಿಂದ 2.10 ಎಕರೆ ಭೂಮಿ ನೀಡಲಾಗಿದೆ.

ಈಗಾಗಲೇ, ಧರಂಸಿಂಗ್ ಅವರ ಹೆಸರಲ್ಲಿ ಶ್ರೀಸಾಮಾನ್ಯರಿಗೆ ಉಚಿತವಾಗಿ ನೀಡುವ ಉದ್ದೇಶದೊಂದಿಗೆ ಸುಸಜ್ಜಿತ ಕಲ್ಯಾಣ ಮಂಟಪ, ಗ್ರಂಥಾಲಯ ಹಾಗೂ ನಿರಂತರ ಅನ್ನ ದಾಸೋಹ ಸೇವೆಯಂತಹ ಜನೋಪಯೋಗಿ ಯೋಜನೆಗಳು ಜನಾರ್ಪಣೆಯಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ