ಅಶಕ್ತರಿಗೆ ಸೂರು ನೆರವಿಗೆ ರಾಮರಾಜ್ಯ ಸಮಿತಿ ಅಸ್ತಿತ್ವಕ್ಕೆ: ಪೇಜಾವರಶ್ರೀ

KannadaprabhaNewsNetwork |  
Published : Dec 30, 2023, 01:15 AM IST
ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಉಡುಪಿಯಲ್ಲಿ ನಾವು ಈಗಾಗಲೇ ಬಡವರಿಗೆ ಮನೆ ನಿರ್ಮಿಸುವುದನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದೇ ಮಾದರಿಯನ್ನು ರಾಮರಾಜ್ಯ ಸಮಿತಿ ಹೆಸರಿನಲ್ಲಿ ಎಲ್ಲ ಕಡೆಗಳಿಗೂ ವಿಸ್ತರಿಸಲಾಗುವುದು. ಯಾರು ಬೇಕಾದರೂ ಯಾರಿಗೂ ಸಹಾಯ ಮಾಡಬಹುದು. ದೇಶ ಭಕ್ತಿ, ರಾಮಭಕ್ತಿ ಬೇರೆ ಅಲ್ಲ ಎಂಬುದನ್ನು ಈ ಸೇವಾ ಕಾರ್ಯ ತೋರಿಸಿಕೊಡಲಿದೆ ಎಂದು ಮಂಗಳೂರಿನಲ್ಲಿ ಶುಕ್ರವಾರ ಪೇಜಾವರ ಶ್ರೀಗಳು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಯಾವುದೇ ಪ್ರತ್ಯೇಕ ಸೇವೆ ಇರುವುದಿಲ್ಲ, ಆದರೆ ರಾಮ ಸೇವೆಯೇ ದೇಶ ಸೇವೆ ಆಗಿದ್ದು, ಅದನ್ನು ಸಾಕ್ಷೀಕರಿಸುವುದಕ್ಕಾಗಿ ರಾಮರಾಜ್ಯ ಸಮಿತಿ ಮೂಲಕ ಹಿಂದು ಸಮಾಜದ ಏಳಿಗೆಗೆ ಸ್ವಯಂಆಗಿ ತೊಡಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಮಿತಿ ಸದಸ್ಯ, ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಮಂಗಳೂರಿನ ಕದ್ರಿ ಕಂಬಳದ ಮಂಜು ಪ್ರಾಸಾದ ಕಲ್ಕೂರ ನಿವಾಸದಲ್ಲಿ ಶುಕ್ರವಾರ ‘ಪೇಜಾವರ ವಿಶ್ವೇಶತೀರ್ಥ ನಮನ’ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ರಾಮರಾಜ್ಯ ಸಮಿತಿಯನ್ನು ರಚಿಸಿ ಅದನ್ನು ರಾಜ್ಯ ಮಾತ್ರವಲ್ಲ ದೇಶಾದ್ಯಂತ ವಿಸ್ತರಿಸಲಾಗುವುದು. ಈ ಸಮಿತಿ ಯಾವುದೇ ದೇಣಿಗೆ ಪಡೆಯುವುದಿಲ್ಲ. ಆರ್ಥಿಕವಾಗಿ ಅಶಕ್ತರಾಗಿರುವವರಿಗೆ ಮನೆ ನಿರ್ಮಾಣ ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡಲು ಅವಕಾಶ ಇದೆ. ಅದನ್ನು ಅವರವರ ಆರ್ಥಿಕ ಶಕ್ತಿಗೆ ಅನುಸಾರ ಅವರೇ ಫಲಾನುಭವಿಗಳ ಆಯ್ಕೆ ಮಾಡಿಕೊಂಡು ನೆರವು ನೀಡಬೇಕು. ಇದರಲ್ಲಿ ಸಮಿತಿಯ ಹಸ್ತಕ್ಷೇಪ ಇರುವುದಿಲ್ಲ ಎಂದರು. ರಾಮನಿಗೆ ಭವ್ಯ ಮಂದಿರ ನಿರ್ಮಾಣ ಬಳಿಕ ರಾಮಭಕ್ತರಿಗೆ ಸೂರು ಇಲ್ಲದೆ ಇರಬಾರದು. ರಾಮ ಮಂದಿರದ ಸೇವೆಯೇ ದೇಶ ಸೇವೆ ಆಗಿದ್ದು, ಯಾರು ಬೇಕಾದರೂ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ಅಂಥವರು ರಾಮನ ದರ್ಶನ ಮಾಡುವಾಗ ತನ್ನ ಸೇವೆ ರಾಮನಿಗೆ ಅರ್ಪಿತ ಎಂದು ಪ್ರಾರ್ಥಿಸಿದರೆ ಸಾಕು ಅಷ್ಟೇ ಎಂದರು. ಉಡುಪಿಯಲ್ಲಿ ನಾವು ಈಗಾಗಲೇ ಬಡವರಿಗೆ ಮನೆ ನಿರ್ಮಿಸುವುದನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದೇ ಮಾದರಿಯನ್ನು ರಾಮರಾಜ್ಯ ಸಮಿತಿ ಹೆಸರಿನಲ್ಲಿ ಎಲ್ಲ ಕಡೆಗಳಿಗೂ ವಿಸ್ತರಿಸಲಾಗುವುದು. ಯಾರು ಬೇಕಾದರೂ ಯಾರಿಗೂ ಸಹಾಯ ಮಾಡಬಹುದು. ದೇಶ ಭಕ್ತಿ, ರಾಮಭಕ್ತಿ ಬೇರೆ ಅಲ್ಲ ಎಂಬುದನ್ನು ಈ ಸೇವಾ ಕಾರ್ಯ ತೋರಿಸಿಕೊಡಲಿದೆ ಎಂದರು. ಆರೋಪದಲ್ಲಿ ಹುರುಳಿಲ್ಲ: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಅಂತಹವರ ಕುಹಕ ಮಾತಿಗೆ ಮನ್ನಣೆ ಇಲ್ಲ. ರಾಮ ಮಂದಿರವನ್ನು ಎರಡೂವರೆ ವರ್ಷದಲ್ಲಿ ನಿರ್ಮಾಣ ಮಾಡುವ ಬಗ್ಗೆ ಎಲ್‌ ಅಂಡ್‌ ಟಿ ಹಾಗೂ ಟಾಟಾ ಕಂಪನಿ ಜತೆ ಮಾತುಕತೆ ನಡೆಸಲಾಗಿತ್ತು. ಆಗ ಅಯೋಧ್ಯೆ ಮಣ್ಣಿನ ಧಾರಣಾ ಸಾಮರ್ಥ್ಯದ ಪರೀಕ್ಷೆ ನಡೆದಿರಲಿಲ್ಲ. ಅಲ್ಲಿ ಧೂಳು, ಮರಳು ಪ್ರದೇಶವಾಗಿದ್ದು, ಸುಮಾರು 50 ಅಡಿ ಆಳಕ್ಕೆ ಬಲವಾದ ವೇದಿಕೆ ನಿರ್ಮಿಸಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಹಾಗಾಗಿ ಮಂದಿರ ನಿರ್ಮಾಣಕ್ಕೆ ಮೂರು ವರ್ಷ ಬೇಕಾಯಿತು. ಪೂರ್ಣ ಕಾಮಗಾರಿ ಆಗದಿದ್ದರೂ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಮರುದಿನದಿಂದಲೇ ಎಲ್ಲರಿಗೆ ಪ್ರವೇಶ: ಜ.22ರಂದು ರಾಮಮಂದಿರ ಲೋಕಾರ್ಪಣೆಗೊಂಡ ಬಳಿಕ ಮರುದಿನದಂದಲೇ ಎಲ್ಲ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ಶ್ರೀರಾಮನ ದರ್ಶನಕ್ಕೆ ನಾಲ್ಕು ಸರತಿ ಸಾಲು ಇರುತ್ತದೆ. ರಾಮ ಮಂದಿರ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆ ವರೆಗೆ ಭಕ್ತರ ಪ್ರವೇಶಕ್ಕೆ ತೆರೆದಿರುತ್ತದೆ. ಮಂದಿರದಲ್ಲಿ ಆರತಿ, ತೀರ್ಥ ಹಾಗೂ ಅಲ್ಲಿನ ಸಕ್ಕರೆ ಮಿಠಾಯಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದರು. ರಾಮ ಮಂದಿರದ ಪೂಜೆ ಹಿಂದಿನಂತೆ ರಮಾನಂದ ಸಂಪ್ರದಾಯ ಪ್ರಕಾರ ನಡೆಯಲಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಪೇಜಾವರಶ್ರೀ ಸ್ಪಷ್ಟಪಡಿಸಿದರು. ಪ್ರಾಣ ಪ್ರತಿಷ್ಠೆಗೆ ಕಾಶಿ ವಿದ್ವಾಂಸರ ನೇತೃತ್ವ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಕಾಶಿ ವಿದ್ವಾಂಸರ ನೇತೃತ್ವದಲ್ಲಿ ನೆರವೇರಲಿದೆ. ಇವರಲ್ಲದೆ ವಿದ್ಯಾಪೀಠ, ನಾಡಿನ ಪ್ರಮುಖ ಕ್ಷೇತ್ರಗಳಿಂದ ವಿದ್ವಾಂಸರು, ವೈದಿಕರು 48 ದಿನಗಳ ಮಂಡಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿತ್ಯ ಕಲಶಾಭಿಷೇಕ, ಹವನಗಳು ನಡೆಯಲಿದೆ ಎಂದರು. ಕಾಮಾಲೆ ಕಣ್ಣಿಗೆ ಎಲ್ಲ ಕಡೆ ಹಳದಿ: ಅಯೋಧ್ಯೆ ಮಂದಿರದ ಲೋಕಾರ್ಪಣೆಗೆ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ವಿಪಕ್ಷಗಳು ಹಾಗೂ ಎಡಪಕ್ಷಗಳು ಆಹ್ವಾನವನ್ನು ತಿರಸ್ಕರಿಸಿದ್ದಲ್ಲದೆ, ಕುಹಕ ಮಾತನ್ನಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರಶ್ರೀ, ಆಹ್ವಾನ ನೀಡದಿದ್ದರೆ ಅದನ್ನೇ ಪ್ರಶ್ನೆ ಮಾಡುತ್ತಾರೆ, ಆಹ್ವಾನ ನೀಡಿದರೆ ಅಲ್ಲೂ ತಿರಸ್ಕರಿಸಿ ಮಾತನಾಡುತ್ತಾರೆ. ಕಾಮಾಲೆ ಕಣ್ಣಿಗೆ ಎಲ್ಲ ಕಡೆ ಹಳದಿ ಎಂಬಂತೆ ವರ್ತಿಸುವುದು ಸರಿಯಲ್ಲ ಎಂದರು. ಆಹ್ವಾನ ನೀಡಿಕೆಯಲ್ಲಿ ತಾರತಮ್ಯ ಎಸಗಿಲ್ಲ. ಅಲ್ಲಿ ಲೋಕಾರ್ಪಣೆ ದಿನ ಕೇವಲ 7 ಸಾವಿರ ಮಂದಿಗೆ ಕುಳಿತುಕೊಳ್ಳಲು ಅವಕಾಶ ಇದೆ. ಹಾಗಾಗಿ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗದು. ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡು ಸಂಯಮದಿಂದ ವರ್ತಿಸಬೇಕು. ಇಂಥಹ ಕಾರ್ಯಗಳು ನಡೆಯುವಾಗ ಟೀಕೆ, ಟಿಪ್ಪಣಿಗಳು ಸಹಜ. ಅದನ್ನು ಉತ್ತಮ ಮನಸ್ಸಿನಿಂದ ನೋಡಬೇಕು ಎಂದರು. ಸರ್ಕಾರದ ತಾರತಮ್ಯ ನೀತಿ ಸರಿಯಲ್ಲಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪೇಜಾವರಶ್ರೀಗಳು, ಈ ವಿಚಾರದಲ್ಲಿ ಸರ್ಕಾರದ ತಾರತಮ್ಯ ನೀತಿಗೆ ಬೇಸರ ವ್ಯಕ್ತಪಡಿಸುತ್ತೇನೆ. ತಪ್ಪಾಗಲೇ ಬಾರದು, ತಪ್ಪಾಗದೇ ಇರುವುದನ್ನು ತಪ್ಪು ಎಂದು ಬಿಂಬಿಸುವುದು ಸರಿಯಲ್ಲ. ಅವರು ಮಾಡಿದರೆ ತಪ್ಪು, ಬೇರೆಯವರು ಮಾಡಿದರೆ ಅದು ತಪ್ಪಲ್ಲ ಎಂಬ ನೀತಿ ಸರಿಯಲ್ಲ. ಅವರ ಹೇಳಿಕೆಗಳು ವೈಯಕ್ತಿಕವಾಗಿದ್ದು, ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.ಹಿಂದು ಪದ್ಧತಿ ಪ್ರಕಾರ ಯುಗಾದಿಗೆ ಹೊಸ ವರ್ಷ. ಹಾಗಾಗಿ ಹಿಂದುಗಳು ಯುಗಾದಿಗೆ ಹೊಸ ವರ್ಷ ಆಚರಿಸುತ್ತಾರೆ. ಡಿಸೆಂಬರ್‌ನಲ್ಲಿ ಆಡಳಿತಾತ್ಮಕವಾಗಿ ಹೊಸ ವರ್ಷ ಅಂತ್ಯವಾದರೆ, ಏಪ್ರಿಲ್‌ನಲ್ಲಿ ಆರ್ಥಿಕ ವರ್ಷ ಆರಂಭ ಇದೆ. ಈಗ ಡಿಸೆಂಬರ್‌ ಅಂತ್ಯಕ್ಕೆ ಹೊಸ ವರ್ಷಾಚರಣೆ ಸಲುವಾಗಿ ಕುಡಿದು, ಕುಪ್ಪಳಿಸುವಂತಹ ಅತಿರೇಕ ಮಾಡಬಾರದು. -ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ ಉಡುಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ