ಕ್ರೀಡಾಂಗಣದ ಕಳಪೆ ನಿರ್ವಹಣೆಗೆ ಬೇಸತ್ತ ಸಾರ್ವಜನಿಕರಿಂದ ವ್ಯಾಪಕ ದೂರು । ಕ್ರೀಡಾಂಗಣ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ
ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆ ಶಾಸಕ ಎಚ್.ಟಿ.ಮಂಜು ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ತಾಲೂಕು ಕ್ರೀಡಾಂಗಣದೊಳಗೆ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳೆರಡರ ಬಗ್ಗೆಯೂ ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು.ಈ ಹಿನ್ನೆಲೆ ಶಾಸಕರು ಭೇಟಿ ನೀಡಿದಾಗ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ. ಉಪಕರಣಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಗುತ್ತಿಗೆದಾರರು ಹಣ ಪಡೆದು ಸಮರ್ಪಕ ಕೆಲಸ ಮಾಡಿಲ್ಲ ಎಂದು ದೂರಿದರು.
ಕ್ರೀಡಾಂಗಣದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳಿದ್ದು, ಅವುಗಳನ್ನು ಕೀಳುವ ಗೋಜಿಗೂ ಹೋಗಿಲ್ಲ. ಕ್ರೀಡಾಂಗಣಕ್ಕೆ ಮಕ್ಕಳು, ಮಹಿಳೆಯರು, ಯುವಕರು ಮುಂಜಾನೆಯೇ ಆಗಮಿಸುತ್ತಾರೆ. ಅವರಿಗೆ ಶುಚಿಯಾದ ಶೌಚಾಲಯವಿಲ್ಲ. ದುರಸ್ಥಿಗೊಳಿಸುವ ಗೋಜಿಗೂ ಹೋಗಿಲ್ಲ ಎಂದು ಸಾರ್ವಜನಿಕರು ಶಾಸಕರು ಮತ್ತು ಅಧಿಕಾರಿಗಳಿಗೆ ದೂರುಗಳ ಸುರಿಮಳೆಗೈದರು.
ಕ್ರೀಡಾಂಗಣದಲ್ಲಿ ರಾತ್ರಿ ಕಾವಲುಗಾರರು ಇಲ್ಲ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ನೀವು ಸುಮ್ಮನಿರುವುದು ನಿಮಗೆ ಶೋಭೆ ತರುವುದಿಲ್ಲ. ಕ್ರೀಡಾಂಗಣವನ್ನು ಸಾರ್ವಜನಿಕ ಸೇವೆಗೆ ನೀಡಿದ ನಂತರವೂ ನೀವು ಸಬೂಬು ಹೇಳುವುದು ತರವಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಇದೇ ವೇಳೆ ಮುಂದಿನ ಒಂದುವರೆ ತಿಂಗಳಲ್ಲಿ ಕ್ರೀಡಾಂಗಣದಿಂದ ಯಾವುದೇ ದೂರುಗಳು ಬಾರದಂತೆ ನಿರ್ವಹಣೆ ಮಾಡಲು ಪ್ರಯತ್ನಿಸುವುದಾಗಿ ಉಪ ನಿರ್ದೇಶಕ ಓಂಪ್ರಕಾಶ್ ತಿಳಿಸಿದರು.
-------
ಕೆ.ಆರ್ .ಪೇಟೆ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.