ಕನಕಪುರ: ಸಮಾಜದಲ್ಲಿ ಸಹಕಾರ ಸಂಘಗಳು ಪರಸ್ಪರ ನಂಬಿಕೆ ಮೇಲೆ ನಡೆಯುತ್ತಿವೆ. ಬಡವರು, ಸಾಮಾನ್ಯರು ವಹಿವಾಟು ನಡೆಸಲು ಸಂಘದ ವಿಶ್ವಾಸಗಳಿಸಿ ಹಣಕಾಸು ವ್ಯವಹಾರ ನಡೆಸುವಂತೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.
ದೇಶದಲ್ಲಿ ಸಾಮಾನ್ಯ ಜನಗಳಿಗೆ ಅನುಕೂಲ ಆಗುವಂತೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರ ಸಂಘಗಳನ್ನು ಕಾರ್ಯ ರೂಪಕ್ಕೆ ತಂದರು. ಸಂಘ ಸಂಸ್ಥೆಗಳು ಮತ್ತು ಸಹಕಾರ ಸಂಘಗಳು ಬಹಳ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸ್ತ್ರೀಶಕ್ತಿ ಸಂಘಗಳು ಬ್ಯಾಂಕುಗಳಿಗೆ ಸರಿಸಮಾನ ವ್ಯವಹಾರ ಮಾಡುವಂತಹ ಮಟ್ಟಕ್ಕೆ ಬೆಳೆದು ನಿಂತಿವೆ. ನಿಮ್ಮ ಸಹಕಾರ ಸಂಘ ಜನರ ವಿಶ್ವಾಸ, ನಂಬಿಕೆ ಗಳಿಸಿ ಸಮಾಜಮುಖಿಯಾಗಿ ಕೆಲಸ ಮಾಡಲಿ. ಯಾವುದೇ ಸಹಕಾರಿ ಸಂಘ, ಸಂಸ್ಥೆಗಳು ಒಬ್ಬರ ಹಿಡಿತದಲ್ಲಿದ್ದಾಗ ಅಲ್ಲಿ ಸಾರ್ವಜನಿಕರ ಹಣಕಾಸಿಗೆ ಭದ್ರತೆ ಇರುವುದಿಲ್ಲ, ಅಂತಹ ಸಹಕಾರ ಸಂಘಗಳನ್ನು ಗುರುತಿಸಿ ಅದರಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಸೀತಾರಾಮೇಗೌಡ ಮಾತನಾಡಿ, ಶಮನಿ ಸಹಕಾರ ಸಂಘ ರಾಜ್ಯಾದ್ಯಂತ 13 ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರು ಹಾಗೂ ಸದಸ್ಯರು ಸೇರ್ಪಡೆಯಾಗಿದ್ದಾರೆ, ಇದು ಸಾರ್ವಜನಿಕರ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. ಕನಕಪುರದಲ್ಲಿ 14ನೇ ಶಾಖೆಯನ್ನು ನಾವು ಪ್ರಾರಂಭಿಸಿದ್ದು ನಮ್ಮ ಸಹಕಾರ ಸಂಘದಲ್ಲಿ ಇತರೆ ಬ್ಯಾಂಕುಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳಿದ್ದು ಜನತೆ ನಮ್ಮ ಸಹಕಾರ ಸಂಘದಲ್ಲಿ ಷೇರುಗಳನ್ನು ಪಡೆದು, ವ್ಯವಹಾರ ನಡೆಸಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಶಿವರಾಜು, ನಿರ್ದೇಶಕ ಕೆಂಪರಾಜು, ಪದ್ಮ, ಪುಟ್ಟಸ್ವಾಮಿ, ವೆಂಕಟೇಶ್, ಸುರೇಶ್, ನಾರಾಯಣರಾವ್ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದಲ್ಲಿ ಶಮನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸೀತಾರಾಮೇಗೌಡ, ಉಪಾಧ್ಯಕ್ಷ ಶಿವರಾಜು, ನಿರ್ದೇಶಕ ಕೆಂಪರಾಜು ಇತರರು ಉಪಸ್ಥಿತರಿದ್ದರು.