ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ
ಶ್ರೀಸುತ್ತೂರು ಮಹಾಸಂಸ್ಥಾನ ಮಠದಿಂದ ಮಳವಳ್ಳಿ ಪಟ್ಟಣದಲ್ಲಿ ನಡೆದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿ ಮಹಾ ಸ್ವಾಮೀಜಿಯವರ ೧೦೬೬ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸುತ್ತೂರು ಮಠವು ಧರ್ಮನಿಷ್ಠೆ ಮತ್ತು ಶಕ್ತಿಯ ತಾಣ. ದೇಶದ ಅತ್ಯಂತ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ. ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಮಠವು ಸಾಮಾಜಿಕ ಮತ್ತು ಧಾರ್ಮಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬಣ್ಣಿಸಿದರು.
ಶ್ರೀಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯವರು ಭಾರತೀಯ ಸಂತ ಪರಂಪರೆಯ ಪ್ರಕಾಶಮಾನವಾದ ಸ್ತಂಭವಾಗಿದ್ದರು. ಅವರ ಇಡೀ ಜೀವನವು ಕರುಣೆ, ತ್ಯಾಗ, ಕಠಿಣತೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಮಾನವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವುದು ಅವರ ಮೂಲ ಉದ್ದೇಶವಾಗಿತ್ತು ಎಂದರು.ಶಿವಯೋಗಿಗಳು ಆತ್ಮಸಾಕ್ಷಾತ್ಕಾರ, ಶಿಸ್ತು ಮತ್ತು ಸೇವೆಯನ್ನು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರು. ಜಾತಿ, ವರ್ಗ ಮತ್ತು ಪಂಥದ ಆಧಾರದ ಮೇಲೆ ಸಂಕುಚಿತ ವ್ಯತ್ಯಾಸಗಳನ್ನು ಮೀರಿ ಸಮಾಜಕ್ಕೆ ಏಕತೆ, ಸಮಾನತೆ ಮತ್ತು ಸಾಮರಸ್ಯದ ಸಂದೇಶವನ್ನು ಬೋಧಿಸಿದರು. ಅವರ ಆಲೋಚನೆಗಳು ಮತ್ತು ಸಂದೇಶಗಳು ಆಂತರಿಕ ಶುದ್ಧತೆ, ಸಂಯಮ ಮತ್ತು ಕರುಣೆಯಿಂದ ಪ್ರೇರಿತವಾದಾಗ ಮಾತ್ರ ಬಾಹ್ಯ ಪ್ರಗತಿ ಅರ್ಥಪೂರ್ಣವಾಗಿರುತ್ತದೆ ಎಂದು ವಿವರಿಸಿದರು.
45 ನಿಮಿಷದಲ್ಲಿ ಮುಗಿದ ವೇದಿಕೆ ಸಮಾರಂಭ
ಸುತ್ತೂರು ಮಹಾಸಂಸ್ಥಾನ ಮಠದ ವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ಆಯೋಜನೆಗೊಂಡಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಉದ್ಘಾಟಿಸಿದರು.
ಮಧ್ಯಾಹ್ನ 3.20ಕ್ಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ ರಾಷ್ಟ್ರಪತಿಗಳು ವೇದಿಕೆ ಬಳಿ ನಿರ್ಮಿಸಿದ್ದ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸುತ್ತೂರು ಶ್ರೀಗಳು ಹಾಗೂ ಗಣ್ಯರೊಂದಿಗೆ ಫೋಟೋಶೂಟ್ ನಡೆಸಿದರು.
ಧಾರ್ಮಿಕ ಕಾರ್ಯಕ್ರಮವಾಗಿದ್ದರಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ರಾಷ್ಟ್ರಪತಿ ಆಗಮನಕ್ಕೂ ಮುನ್ನ ವೇದಿಕೆ ಏರಿದ ಮೆಟ್ಟಿಲುಗಳ ಪಕ್ಕದಲ್ಲೇ ಶೂಗಳನ್ನು ಬಿಟ್ಟು ಬಂದು ಆಸೀನರಾಗಿದ್ದರು. ಇದನ್ನು ಕಂಡ ಎಸ್‌ಪಿಜಿ ತಂಡದವರು ಮತ್ತೆ ಅವರನ್ನು ಶೂ ಹಾಕಿಕೊಳ್ಳುವಂತೆ ಹೇಳಿದಾಗ ಎದ್ದು ಹೋಗಿ ಶೂ ಹಾಕಿಕೊಂಡು ಬಂದು ಮತ್ತೆ ಆಸೀನರಾದರು.
ರಾಷ್ಟ್ರಪತಿಗಳ ಜೊತೆ ಆಗಮಿಸಿದ ಅಧಿಕಾರಿ ವರ್ಗದವರಿಗೆ, ವಿವಿಧ ಮಠಾಧೀಶರುಗಳಿಗೆ ವೇದಿಕೆ ಮುಂಭಾಗ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಮೇಲೆ ರಾಷ್ಟ್ರಪತಿ ಸೇರಿದಂತೆ ಏಳು ಜನರಿಗೆ ಮಾತ್ರ ಕೂರುವುದಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಭಾಷಣಕ್ಕೆ ಸೀಮಿತ ಸಮಯವನ್ನು ನಿಗದಿಪಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲರಿಗೂ ನಮಸ್ಕರಿಸಿ ಅಲ್ಲಿಂದ ನಿರ್ಗಮಿಸಿದರು. ಕೇವಲ 45 ನಿಮಿಷದಲ್ಲಿ ಇಡೀ ಸಮಾರಂಭ ಸಮಾಪ್ತಿಗೊಂಡಿತು.