- ಶೈಕ್ಷಣಿಕ ಸಾಮಗ್ರಿಗಳ ವಿತರಿಸಿ ಕೃತಗ್ಯತಾ ಟ್ರಸ್ಟ್ ಸಂಸ್ಥಾಪಕಿ ಅರುಣ ದಿವಾಕರ್ ಸಲಹೆ - - - ಕನ್ನಡಪ್ರಭ ವಾರ್ತೆ ಹರಿಹರ
ಸಾಧಕರಿಗೆ ಸವಾಲುಗಳು ಸಹಜ. ಈ ಸಂದರ್ಭದಲ್ಲಿ ತೊಂದರೆ ಹಾಗೂ ಸಮಸ್ಯೆಗಳನ್ನು ಮೆಟ್ಟಿಲನ್ನಾಗಿ ಮಾಡಿಕೊಂಡಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಸಂಸ್ಥಾಪಕಿ ಅರುಣ ದಿವಾಕರ್ ಅಭಿಪ್ರಾಯಪಟ್ಟರು.ನಗರದ ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೃತಗ್ಯತಾ ಟ್ರಸ್ಟ್ ವತಿಯಿಂದ ಉಚಿತ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಷ್ಟಗಳೇ ಕಲಿಕೆಗೆ ಪ್ರೇರಣೆಯಾದಾಗ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಸಾಧನೆಯ ಶಿಖರವನ್ನೇರಿದವರು ಹಲವಾರು ಕಷ್ಟ ಹಾಗೂ ತೊಂದರೆಗಳನ್ನು ಅನುಭವಿಸಿದವರೇ ಆಗಿದ್ದಾರೆ. ಅವೆಲ್ಲವನ್ನೂ ದಾಟಿ, ಅನುಭವಿಸಿದ ಮೇಲೆಯೇ ಎಲ್ಲರೂ ಗುರುತಿಸುವಂಥ ಸಾಧನೆ ಮೆರೆದಿರುತ್ತಾರೆ ಎಂದರು.ನಮ್ಮ ಟ್ರಸ್ಟ್ ವತಿಯಿಂದ ಹರಿಹರ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಶಾಲೆಯ ೧೨ ಸಾವಿರ ಮಕ್ಕಳಿಗೆ ಈ ವರ್ಷದಲ್ಲಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ. ಇಷ್ಟಲ್ಲದೇ, ಪ್ರಯೋಗಾಲಯ, ಗ್ರಂಥಾಲಯ ಪುಸ್ತಕ, ಕ್ರೀಡಾ ಸಲಕರಣೆ, ವಿದ್ಯಾರ್ಥಿ ವೇತನ, ಶೌಚಾಲಯ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳನ್ನು ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎನ್ನುವ ನಮ್ಮ ಸಂಸ್ಥೆ ಆಶಯದಂತೆ ಕಳೆದ ಹಲವಾರು ವರ್ಷಗಳಿಂದ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.ನಿವೃತ್ತ ಸರ್ಕಾರಿ ನೌಕರ ಎ.ಕೆ.ಭೂಮೇಶ್ ಮಾತನಾಡಿ, ಸಂಸ್ಥೆಯವರು ತಮಗೆ ಉಚಿತವಾಗಿ ನೀಡಿರುವ ಶೈಕ್ಷಣಿಕ ಸಾಮಗ್ರಿಗಳನ್ನು ಬಳಸಿಕೊಂಡು ಶೇ.೧೦೦ ರಷ್ಟು ಫಲಿತಾಂಶ ಬಂದಾಗ ಮಾತ್ರ ಈ ಸಂಸ್ಥೆಗೆ ನಿಜವಾದ ಕೃತಜ್ಞತೆ ಅರ್ಪಿಸಿದಂತೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ದಾವಣಗೆರೆ ಉಪನಿರ್ದೇಶಕರ ಕಚೇರಿಯ ಸುರೇಶ ಮಾತನಾಡಿ, ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ನಿರ್ಲಕ್ಷಿಸದೇ ಅವರಿಗೂ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಬೇಕು. ಆಗ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕೃತಗ್ಯತಾ ಟ್ರಸ್ಟ್‌ನ ದಿವಾಕರ್, ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ರೇವಣ್ಣ ನಾಯ್ಕ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯದರ್ಶಿ ಶರಣ ಕುಮಾರ ಹೆಗಡೆ, ಪತ್ರಕರ್ತ ಎಚ್.ಸಿ. ಕೀರ್ತಿಕುಮಾರ್, ಶಿಕ್ಷಕರಾದ ವೆಂಕಟೇಶ್, ಮುಷ್ತಾಕ್, ಬಿ.ಎಸ್.ವೀರಪ್ಪ, ಮಲ್ಲಿಕಾರ್ಜುನ, ಪೀರು ನಾಯ್ಕ್ ಸೇರಿದಂತೆ ಇತರರಿದ್ದರು.
- - - -೧೧ಎಚ್‌ಆರ್‌ಆರ್೧:ಹರಿಹರ ನಗರದ ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.