ಹಿಂದೂಗಳ ಪಾಲಿಗೆ ಜ. 22 ಪವಿತ್ರ ದಿನವಾಗಲಿದೆ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಹಾಗೂ ವಿಶ್ವ ಹಿಂದೂ ಪರಿಷತ್ ಮುಂಡರಗಿ ವತಿಯಿಂದ ಹಮ್ಮಿಕೊಂಡಿದ್ದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಳಸದ ಶೋಭ ಯಾತ್ರೆ ನಡೆಯಿತು.

ಮುಂಡರಗಿಯಲ್ಲಿ ಮಂತ್ರಾಕ್ಷತೆ ಕಳಸದ ಶೋಭ ಯಾತ್ರೆಮುಂಡರಗಿ: ರಾಮ ಮಂದಿರ ನಿರ್ಮಾಣದ ಹಿಂದೆ ಐದು ಶತಮಾನಗಳ ಹೋರಾಟ ಮತ್ತು ಕೋಟ್ಯಂತರ ಕರ ಸೇವಕರ ಬಲಿದಾನವಿದೆ. ನೂರಾರು ವರ್ಷಗಳಿಂದ ಅಪಮಾನಗಳನ್ನು ನುಂಗಿ ಅನೇಕ ಆಕ್ರಮಣಕಾರರ ದಾಳಿ ಎದುರಿಸಿ, ಎದೆಗುಂದದೆ ಹೋರಾಟದಲ್ಲಿ ಧುಮುಕಿದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಹಿಂದೂಗಳ ಪಾಲಿಗೆ 2024ರ ಜನವರಿ 22 ಪವಿತ್ರ ದಿನವಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ ಹೇಳಿದರು. ಅವರು ಶುಕ್ರವಾರ ಪಟ್ಟಣದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಹಾಗೂ ವಿಶ್ವ ಹಿಂದೂ ಪರಿಷತ್ ಮುಂಡರಗಿ ವತಿಯಿಂದ ಹಮ್ಮಿಕೊಂಡಿದ್ದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಳಸದ ಶೋಭ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದೂಗಳ ಅಸ್ಮಿತೆಯ ಪ್ರತೀಕ ಹಾಗೂ ಕೋಟ್ಯಂತರ ರಾಮ ಭಕ್ತರ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಶಿಕ್ಷಕ ಎಸ್.ಆರ್. ರಿತ್ತಿ ಮಾತನಾಡಿ, ಶ್ರೀ ರಾಮಚಂದ್ರ ಎಂದರೆ ಆದರ್ಶ ಪುರುಷ, ರಾಮನಾಮ ಸ್ಮರಣೆಯಿಂದ ಮಾನವನ ಜನ್ಮ ಪಾವನವಾಗಲಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಬಹುದಿನಗಳ ಕನಸಾಗಿತ್ತು. ಅದು ಇದೀಗ ನನಸಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಶ್ರೀನಿವಾಸ ಕಟ್ಟಿಮನಿ, ಹೇಮಗಿರೀಶ ಹಾವಿನಾಳ, ರವಿ ಕರಿಗಾರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಶಿವಪ್ಪ ಚಿಕ್ಕಣ್ಣನವರ, ನಾಗೇಶ ಹುಬ್ಬಳ್ಳಿ, ಲಿಂಗರಾಜಗೌಡ ಪಾಟೀಲ, ಅನಂತ ಚಿತ್ರಗಾರ, ಯಲ್ಲಪ್ಪ ಅಕ್ಕಸಾಲಿ, ಪವಿತ್ರ ಕಲ್ಲಕುಟಿಗರ, ಜ್ಯೋತಿ ಹಾನಗಲ್, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ, ಮಹೇಶ ನಾಗರಹಳ್ಳಿ, ಮಾರುತಿ ಮ್ಯಾಗೇರಿ, ಬಸವರಾಜ ಸಂಗನಾಳ, ನಾಗರಾಜ ಗುಡಿಮನಿ, ಯಲ್ಲಪ್ಪ ಗಣಚಾರಿ, ದೇವಪ್ಪ ಇಟಗಿ, ಪ್ರವೀಣ ಅಕ್ಕಸಾಲಿ, ಸುನೀಲ್ ನೀರಲಗಿ, ಮರಡ್ಡಿ ಮುದಕನಗೌಡ್ರ, ಪಾಲಾಕ್ಷಿ ಗಣದಿನ್ನಿ, ಮಂಜು ಮುಧೋಳ, ಲೋಹಿತ ಪುರದ, ಅಶೋಕ ಚೂರಿ, ಹನುಮಂತರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ತಾಲೂಕು ಸಂಯೋಜಕ ಚಂದ್ರಶೇಖರ ಹಿರೇಮಠ ನಿರೂಪಿಸಿದರು.

Share this article