- ಸಂಸದೆ ಡಾ.ಪ್ರಭಾ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಲೋಕಸಭೆ ಚುನಾವಣೆಯಲ್ಲಿ 10-15 ಸೀಟು ಕಡಿಮೆ ಬಂದಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಿರಲಿಲ್ಲ. ಅವರಿಗೆ ಅದೃಷ್ಟವಿದ್ದು, ಮತ್ತೆ ಪ್ರಧಾನಿ ಆಗಿದ್ದಾರೆ. ಆದರೂ, ನಿತೀಶ್ ಕುಮಾರ ಹಾಗೂ ಚಂದ್ರಬಾಬು ನಾಯ್ಡು ಶನಿ ಕಾಡಿದಂತೆ ಕಾಡುವುದು ಸಹ ನಿಲ್ಲುವುದಿಲ್ಲ. ಈ ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲೇ ಮೋದಿಗೆ ಸಾಕಾಗಿಹೋಗುತ್ತದೆ ಎಂದು ಶಾಸಕ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಾವೀಮ ರಾಷ್ಟ್ರೀಯ ಉಪಾಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಮಾತನಾಡಿ, ಈ ಹಿಂದೆ ತಾವು ವಿಪ ಚುನಾವಣೆಗೆ ನಿಂತಾಗ ಆದ ಅನುಭವಗಳಿಂದಾಗಿ ರಾಜಕೀಯ ಸಹವಾಸವೇ ಸಾಕೆಂದು ಕೈಮುಗಿದು ಬಿಟ್ಟೆ. ದಾವಣಗೆರೆ, ಚಿತ್ರದುರ್ಗ, ಕೋಲಾರ, ತುಮಕೂರು ಒಳಗೊಂಡ ವಿಪ ಚುನಾವಣೆ ಅದು. ನನ್ನ ವಿರುದ್ಧ ಬಿಜೆಪಿಯ ದಿವಂಗತ ಮಲ್ಲಿಕಾರ್ಜುನಯ್ಯ ಸ್ಪರ್ಧಿಸಿ ಗೆದ್ದಿದ್ದರು ಎಂದರು.
ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಹಿರಿಯ ಜವಳಿ ವರ್ತಕ, ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ.ಉಮಾಪತಿ ಇತರರು ಇದ್ದರು.
ದಾವಣಗೆರೆಯಲ್ಲಿ ಅಭಾವೀಮ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಬಿ.ಸಿ.ಉಮಾಪತಿ ಇತರರು ಸನ್ಮಾನಿಸಿದರು.