ಸೈನಿಕರಿಗೆ ಪ್ರಾಣಕ್ಕಿಂತ ದೇಶ ಮುಖ್ಯ: ಯೋಧ ದಂಡಿನ

KannadaprabhaNewsNetwork | Published : Jul 27, 2024 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ದೇಶವನ್ನು ಕಾಪಾಡುವ ಸೈನಿಕರನ್ನು ಎಷ್ಟು ಗೌರವಿಸಿದರೂ ಸಾಲದು ಎಂದು ಯೋಧ ಸಿದ್ಧಲಿಂಗಪ್ಪ ದಂಡಿನ ಹೇಳಿದರು. ಇಲ್ಲಿನ ಪಿ.ಇ. ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕರು ದೇಶವನ್ನು ರಕ್ಷಿಸುವ ದೇಶ ಭಕ್ತರು. ಕಾರ್ಗಿಲ್ ಯುದ್ಧದಲ್ಲಿ ಅವರು ಪ್ರಾಣದ ಹಂಗು ತೊರೆದು ಹೋರಾಡಿದರು. ಹೋರಾಟದಲ್ಲಿ ನಮ್ಮವರೂ ಬಲಿಯಾದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡದೇಶವನ್ನು ಕಾಪಾಡುವ ಸೈನಿಕರನ್ನು ಎಷ್ಟು ಗೌರವಿಸಿದರೂ ಸಾಲದು ಎಂದು ಯೋಧ ಸಿದ್ಧಲಿಂಗಪ್ಪ ದಂಡಿನ ಹೇಳಿದರು. ಇಲ್ಲಿನ ಪಿ.ಇ. ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕರು ದೇಶವನ್ನು ರಕ್ಷಿಸುವ ದೇಶ ಭಕ್ತರು. ಕಾರ್ಗಿಲ್ ಯುದ್ಧದಲ್ಲಿ ಅವರು ಪ್ರಾಣದ ಹಂಗು ತೊರೆದು ಹೋರಾಡಿದರು. ಹೋರಾಟದಲ್ಲಿ ನಮ್ಮವರೂ ಬಲಿಯಾದರು. ಅವರ ಸ್ಮರಣೆ ನಮ್ಮಲ್ಲಿ ಆತ್ಮವಿಶ್ವಾಸ, ದೇಶಭಕ್ತಿ, ಸದಾ ಜಾಗೃತಗೊಳಿಸುತ್ತದೆ. ವಿದ್ಯಾರ್ಥಿಗಳು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಯೋಧ ನಾಮದೇವ ಭಜಂತ್ರಿ ಮಾತನಾಡಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ಕೊರೆಯುವ ಚಳಿಯಲ್ಲಿ ಅನುಭವಿಸುವ ಸಂಕಷ್ಟ ಹೆಳತೀರದು. ಸೈನಿಕರ ಸಾಹಸ, ಶೌರ್ಯ ಕಾರ್ಗಿಲ್ ವಿಜಯಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂದು ಹೇಳಿದರು. ವಿದ್ಯಾರ್ಥಿಗಳಾದ ನಿಖಿಲ ಕಟ್ಟಿಮನಿ, ನಂದಾ ಪರಗಿ ಕಾರ್ಗಿಲ್ ವಿಜಯ ದಿವಸ ಕುರಿತು ಮಾತನಾಡಿದರು. ಚೇರಮನ್‌ ಅಶೋಕ ಹೆಗಡಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಗೂ ನೃತ್ಯಗಳು ನಡೆದವು. ಕಾರ್ಯಕ್ರಮದಲ್ಲಿ ಯೋಧರಾದ ಸಿದ್ಧಲಿಂಗಪ್ಪ ದಂಡಿನ, ಪರಶುರಾಮ ಜಾಧವ, ನಾಮದೇವ ಭಜಂತ್ರಿ, ಸುರೇಶ ಮುಸಿಗೇರಿ ಹಾಗೂ ಯೋಧರ ಕುಟುಂಬದವರನ್ನು ಸನ್ಮಾನಿಸಲಾಯಿತು. ಶಾಲಾ ಸಮಿತಿ ಸದಸ್ಯರಾದ ವಿಠ್ಠಲಸಾ ಕಾವಡೆ, ಅಮಾತೆಪ್ಪ ಕೊಪ್ಪಳ, ರವಿ ಅಂಗಡಿ, ಶಾಲೆಯ ಮುಖ್ಯ ಗುರುಮಾತೆ ಜೆ.ಜೆ.ಲೋಬೋ ಹಾಗೂ ವಿ.ಬಿ. ಹಳ್ಳೂರ, ಸುಜಾತ ಕರಡಿಗುಡ್ಡ, ವಿದ್ಯಾರ್ಥಿ ಪ್ರತಿನಿಧಿಗಳಾದ ವಿಶ್ವನಾಥ ಚೌಕಿಮಠ ಹಾಗೂ ಅಪೂರ್ವ ಬೀಳಗಿ ಉಪಸ್ಥಿತರಿದ್ದರು. ಸ್ಪಂದನಾ ಚೋಳಾ, ಚಿನ್ಮಯಿ ಜುಟ್ಟಲಮಡ್ಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಶಿಕ್ಷಕಿ ಎಸ್.ಎ.ಮೋಮಿನ ಸ್ವಾಗತಿಸಿದರು. ಶಿಕ್ಷಕಿ ಪಿ.ಎಚ್. ಉಂಕಿ ವಂದಿಸಿದರು.

Share this article