ಮತ್ತಷ್ಟು ಚುರುಕಾದ ಮಳೆ: ಇಂದೂ ಶಾಲಾ ಕಾಲೇಜಿಗೆ ರಜೆ

KannadaprabhaNewsNetwork |  
Published : Jul 27, 2024, 12:47 AM IST
ಚಿಕ್ಕಮಗಳೂರಿನ ಗವನಹಳ್ಳಿ ಗ್ರಾಮದ ಬಳಿ ಬೃಹತ್‌ ಮರ ರಸ್ತೆಗೆ ಬಿದ್ದಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಜೋರಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಶನಿವಾರವೂ ಮಲೆನಾಡಿನ 6 ತಾಲೂಕುಗಳ ಅಂಗನವಾಡಿ, ಶಾಲೆ ಮತ್ತು ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಮಲೆನಾಡಿನ 6 ತಾಲೂಕುಗಳ ಶಾಲೆಗಳ ಜತೆಗೆ ಕಾಲೇಜಿಗೂ ರಜೆ । ಹಲವೆಡೆ ಮರಗಳು ಬಿದ್ದು ಹಾನಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಜೋರಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಶನಿವಾರವೂ ಮಲೆನಾಡಿನ 6 ತಾಲೂಕುಗಳ ಅಂಗನವಾಡಿ, ಶಾಲೆ ಮತ್ತು ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ ಹಾಗೂ ಎನ್‌.ಆರ್‌.ಪುರ ತಾಲೂಕುಗಳಿಗೆ ಈ ರಜೆ ಅನ್ವಯ ವಾಗಲಿದ್ದು, ಇನ್ನುಳಿದಂತೆ ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಎಂದಿನಂತೆ ಶಾಲೆ, ಕಾಲೇಜುಗಳು ನಡೆಯಲಿವೆ.

ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದ್ದರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಪ್ರವಾಹ ಇನ್ನಷ್ಟು ಏರಿಕೆಯಾಗಿದೆ. ಆಸುಪಾಸಿನ ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ. ಹೊರನಾಡು - ಕಳಸ ಸಂಪರ್ಕದ ಹೆಬ್ಬಾಳ್‌ ಸೇತುವೆ ಮೇಲೆ ಇನ್ನಷ್ಟು ನೀರು ಏರಿಕೆಯಾಗಿದೆ. ಶೃಂಗೇರಿಯ ಗಾಂಧಿ ಮೈದಾನ, ಕೆವಿಆರ್‌ ಬೈಪಾಸ್‌, ಕುರುಬಗೇರಿ ರಸ್ತೆಗಳ ಜಲಾವೃತವಾಗಿದ್ದವು.

ಎನ್‌.ಆರ್‌.ಪುರ ತಾಲೂಕಿನ ಕುದುರೆಗುಂಡಿ - ಕಾನೂರು ಕಟ್ಟಿಮನಿ ಹೋಗುವ ರಸ್ತೆ ಮೇಲೆ ನೀರು ಬಂದಿದ್ದರಿಂದ ಶುಕ್ರವಾರ ಸಂಜೆ ಈ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು.

ಚಿಕ್ಕಮಗಳೂರಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 179 ರಲ್ಲಿ ಗವನಹಳ್ಳಿ ಗ್ರಾಮದ ಬಳಿ ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ದಿಢೀರ್‌ ರಸ್ತೆಗೆ ಬಿದ್ದ ಪರಿಣಾಮ 2 ಕಾರುಗಳ ಮುಂಭಾಗ ಜಖಂ ಆಗಿದ್ದು, ಆಟೋವೊಂದಕ್ಕೆ ಹಾನಿಯಾಗಿದೆ. ಮಲೆನಾಡಿನ ಹಲವೆಡೆ ಮರಗಳು ಬಿದ್ದು ಕಳೆದ 15 ದಿನಗಳಿಂದ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆಯಾಗಿದೆ. ಮಲೆನಾಡಿನ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಇಲ್ಲದಂತಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ವ್ಯಾಪ್ತಿಯಲ್ಲೂ ವಿದ್ಯುತ್‌ ಏರುಪೇರಾಗುತ್ತಿದೆ.

--ಬಾಕ್ಸ್--

ಮಳೆ ಪ್ರಮಾಣ

ಕಳೆದ 24 ಗಂಟೆಗಳಲ್ಲಿ ಮೂಡಿಗೆರೆ ಪಟ್ಟಣದಲ್ಲಿ 65.8 ಮಿ.ಮೀ. ಮಳೆಯಾಗಿದ್ದರೆ, ಕೊಟ್ಟಿಗೆಹಾರದಲ್ಲಿ 143, ಗೋಣಿಬೀಡು- 200, ಚಿಕ್ಕಮಗಳೂರು- 35, ವಸ್ತಾರೆ- 90.4, ಕೊಪ್ಪ- 110, ಹರಿಹರಪುರ- 110, ಜಯಪುರ- 70.2, ಬಸರೀಕಟ್ಟೆ- 109.8, ಅಜ್ಜಂಪುರ- 50. ಎನ್‌.ಆರ್‌.ಪುರ- 55.8, ಬಾಳೆಹೊನ್ನೂರು- 51.2, ಶೃಂಗೇರಿ- 94, ಕಿಗ್ಗಾ - 164.2 ಹಾಗೂ ಕೆರೆಕಟ್ಟೆಯಲ್ಲಿ 198.2 ಮಿ.ಮೀ. ಮಳೆಯಾಗಿದೆ. 26 ಕೆಸಿಕೆಎಂ 2ಚಿಕ್ಕಮಗಳೂರಿನ ಗವನಹಳ್ಳಿ ಗ್ರಾಮದ ಬಳಿ ಬೃಹತ್‌ ಮರ ರಸ್ತೆಗೆ ಬಿದ್ದಿರುವುದು.

26 ಕೆಸಿಕೆಎಂ 3ಚಿಕ್ಕಮಗಳೂರಿನ ಗವನಹಳ್ಳಿ ಗ್ರಾಮದ ಬಳಿ ಬೃಹತ್ ಮರ ಬಿದ್ದ ಪರಿಣಾಮ ಎರಡು ಕಾರ್‌ಗಳು ಜಖಂ ಆಗಿರುವುದು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌