ಯಲ್ಲಾಪುರ: ಯೋಗ್ಯತೆ ಆಧರಿಸಿ ತಮ್ಮೊಳಗಿನ ಪ್ರತಿಭಾ ಶಕ್ತಿ ಅನಾವರಣಗೊಳಿಸುವ ಪ್ರಸ್ತುತ ಶತಮಾನದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಕಾಲೇಜು ಹಂತ ಶೈಕ್ಷಣಿಕ ಬದುಕಿಗೆ ನಿರ್ಣಾಯಕವಾದುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶನಿವಾರ ತಾಲೂಕಿನ ಮಂಚೀಕೇರಿಯ ಸಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ೪೧ ನೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನನ್ನ ವಿಧಾನಸಭಾ ಮತಕ್ಷೇತ್ರದಲ್ಲಿರುವ ಎಲ್ಲ ಕಾಲೇಜುಗಳಿಗಿಂತ ಉತ್ತಮ ಸಾಧನೆಯಿಂದಾಗಿ ಹೆಸರುಗಳಿಸಿರುವ ಮಂಚೀಕೇರಿ ಪಪೂ.ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.ವಿದ್ಯಾರ್ಥಿಗಳಿಗೆ ಅಂಕಗಳಿಕೆಯೊಂದೇ ಗುರಿಯಾಗಿರದೇ,ಕಂಪ್ಯೂಟರ್ ಮತ್ತು ಇಂಗ್ಲೀಷ್ ಶಿಕ್ಷಣವೂ ಅಗತ್ಯವಾಗಿದ್ದು, ಇವು ಇಂದಿನ ಅನಿವಾರ್ಯವಾಗಿದೆ ಎಂದ ಶಾಸಕರು, ಪ್ರಾಮಾಣಿಕವಾಗಿ ಪರಿಶ್ರಮದಿಂದ ಮಾಡುವ ಕಲಿಕೆ ಯೋಜಿತ ಸಾಧನೆಗಳಿಗೆ ನೆರವಾಗುತ್ತದೆ ಎಂದರು.
ಅತಿಥಿಗಳಾಗಿದ್ದ ವಿಶ್ವದರ್ಶನ ಮೀಡಿಯಾ ಸ್ಕೂಲಿನ ಪ್ರಾಂಶುಪಾಲ ನಾಗರಾಜ ಇಳೇಗುಂಡಿ ಮಾತನಾಡಿ, ದೇಶದ ಪರಿಸ್ಥಿತಿ ವಸಾಹತುಶಾಹಿ ಮನಸ್ಥಿತಿಗೊಳಗಾಗಿದ್ದ ಸನ್ನಿವೇಶದಲ್ಲಿ ನಮ್ಮ ಆಂತರ್ಯ ಮತ್ತು ಮಾನಸಿಕತೆ ಸಂಪೂರ್ಣ ಬದಲಾಯಿಸಿದ ಮಹಾಪುರುಷ ವಿವೇಕಾನಂದರನ್ನು ನಾವು ಎಂದಿಗೂ ಸ್ಮರಿಸಬೇಕು. ಯುವಶಕ್ತಿ ಕುರಿತು ಅವರು ವಿಶ್ವಾಸವಿರಿಸಿ ನೀಡಿದ ಸಂದೇಶ ನಮಗೆಲ್ಲರಿಗೂ ಇಂದಿಗೂ ಪ್ರಸ್ತುತವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ಜಿ. ಹೆಗಡೆ ಬೆದೆಹಕ್ಕಲು ಸಾಂದರ್ಭಿಕ ಮಾತನಾಡಿದರು. ಕಂಪ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಸದಸ್ಯ ಗಣೇಶ ರೋಖಡೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕುಮಾರ ಹೆಗಡೆ, ಶಂಕರ ಭಟ್ಟ ಅಣಲೇಸರ, ಸುರೇಶ ನಾಯ್ಕ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ರಾಜ್ಯಮಟ್ಟದ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪ್ರಥಮ ಪಿಯು ವಿದ್ಯಾರ್ಥಿ ವಿಠ್ಠಲ ಕಾಳೆಯನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸಾಧನೆಗಳಿಗಾಗಿ ಕೊಡ ಮಾಡುವ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕ್ರೀಡಾ ವೀರಾಗ್ರಣಿಗಳಾಗಿ ಆಯ್ಕೆಗೊಂಡ ಸವಿತಾ ಬೋವಿವಡ್ಡರ್ ಮತ್ತು ಪ್ರದೀಪ್ ಕೊಡಿಯಾ ಅವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು.ಲಕ್ಷ್ಮೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಿ.ಜಿ. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಎಂ.ವಿ. ಹೆಗಡೆ, ಗೋಪಾಲ ಗೌಡ, ಬಸವರಾಜ ಕುಡುವಕ್ಕಲ್, ರಾಮಲಿಂಗೇಶ್ವರ ಹೆಬ್ಬಾರ, ರಾಮಕೃಷ್ಣ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ರಾಮ ಗಾಂವ್ಕರ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಪ್ರತಿನಿಧಿ ರಕ್ಷಿತಾ ಹೂಗಾರ ವಂದಿಸಿದರು.