ರಾಜ್ಯದಲ್ಲಿ ವೈಟ್ ಟೀ-ಶರ್ಟ್ ಆರ್ಮಿ ಅಸ್ತಿತ್ವಕ್ಕೆ

KannadaprabhaNewsNetwork | Updated : Jul 13 2024, 09:31 AM IST

ಸಾರಾಂಶ

ಕಾಂಗ್ರೆಸ್ಸಿನಲ್ಲಿ ಯುವಕರನ್ನು ಒಳಗೊಂಡ ಹೊಸ ಸಂಘಟನೆ ಆರಂಭಿಸಿದ್ದು, ಇದಕ್ಕೆ ವೈಟ್ ಟೀ-ಶರ್ಟ್ ಆರ್ಮಿ ನಾಮಕರಣ ಮಾಡಿದೆ. ರಾಜ್ಯದಲ್ಲಿ ಎಲ್ಲಿಯಾದರೂ ಸಂವಿಧಾನಕ್ಕೆ ಧಕ್ಕೆಯಾಗುವ ಕೆಲಸ ನಡೆದಾಗ ಈ ಸಂಘಟನೆ ಹೋರಾಟ ನಡೆಸಲಿದೆ.

ಹುಬ್ಬಳ್ಳಿ:  ರಾಹುಲ್‌ ಗಾಂಧಿ ನಿರ್ದೇಶನ ಮೇರೆಗೆ ರಾಜ್ಯದಲ್ಲಿ ವೈಟ್ ಟೀ-ಶರ್ಟ್ ಆರ್ಮಿ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮಹ್ಮದ್‌ ನಲಪಾಡ್ ಹೇಳಿದರು.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರದಿಂದ ರಾಜ್ಯ ಯುವ ಕಾಂಗ್ರೆಸ್ ಘಟಕ ಮೂರು ದಿನ ಹಮ್ಮಿಕೊಂಡಿರುವ ಯುವ ವಿಕಾಸ ಶಿಬಿರದಲ್ಲಿ ಹೊಸ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ಸಿನಲ್ಲಿ ಯುವಕರನ್ನು ಒಳಗೊಂಡ ಹೊಸ ಸಂಘಟನೆ ಆರಂಭಿಸಿದ್ದು, ಇದಕ್ಕೆ ವೈಟ್ ಟೀ-ಶರ್ಟ್ ಆರ್ಮಿ ನಾಮಕರಣ ಮಾಡಿದೆ. ರಾಜ್ಯದಲ್ಲಿ ಎಲ್ಲಿಯಾದರೂ ಸಂವಿಧಾನಕ್ಕೆ ಧಕ್ಕೆಯಾಗುವ ಕೆಲಸ ನಡೆದಾಗ ಈ ಸಂಘಟನೆ ಹೋರಾಟ ನಡೆಸಲಿದೆ. ಪ್ರತಿ ಮತಗಟ್ಟೆಗೆ ಒಬ್ಬರಂತೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 250 ರಿಂದ 280 ಜನರನ್ನು ಸಂಘಟನೆಗೆ ನೇಮಕ ಮಾಡಲಾಗುವುದು ಎಂದರು.

ಈ ಶಿಬಿರದಲ್ಲಿ ಯುವ ಕಾಂಗ್ರೆಸ್‌ನ ರಾಜ್ಯಮಟ್ಟದ ಪದಾಧಿಕಾರಿಗಳು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿ 180 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಪಕ್ಷದ ರಾಜ್ಯಮಟ್ಟದ ಮುಖಂಡರು, ಪ್ರಮುಖರು ಪಾಲ್ಗೊಳ್ಳುತ್ತಿಲ್ಲ ಎಂದ ಅವರು, ಮುಂಬರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರು ಲಘುವಾಗಿ ತೆಗೆದುಕೊಳ್ಳಬಾರದು. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದರೆ ಮಾತ್ರ ಇಂತಹ ಯೋಜನೆಗಳು ಮುಂದುವರಿಯುತ್ತದೆ ಎಂಬುದನ್ನು ಮನೆ-ಮನೆಗೆ ಹೋಗಿ ಮನವರಿಕೆ ಮಾಡುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗುತ್ತದೆ ಎಂದು ನಲಪಾಡ್‌ ಹೇಳಿದರು.

ಯುವ ವಿಕಾಸ ಶಿಬಿರದಲ್ಲಿ ಶನಿವಾರ ಬೆಳಗ್ಗೆ 6ರಿಂದ 8 ಗಂಟೆಯ ವರೆಗೆ ಅಮರಗೋಳದಲ್ಲಿ ಮನೆ-ಮನೆಗೆ ತೆರಳಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಭಾನುವಾರ ಬೆಳಗ್ಗೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕಾರಿಣಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪಾಲ್ಗೊಳ್ಳುವರು ಎಂದರು.

ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ ಮಾತನಾಡಿ, ಬಹಳ ದಿನಗಳ ನಂತರ ಹುಬ್ಬಳ್ಳಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಘಟಕದ ಪದಾಧಿಕಾರಿಗಳನ್ನು ಶಿಗ್ಗಾಂವಿ ಕ್ಷೇತ್ರಕ್ಕೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ ಎಂದರು.

ಮೊದಲ ದಿನದ ಉಪನ್ಯಾಸ:

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ರಾಜಕೀಯ ಕಾರ್ಯದರ್ಶಿ ದೀಪಕ ತಿಮ್ಮಯ್ಯ ಗುಣಮಟ್ಟದ ನಾಯಕತ್ವ ಕುರಿತು, ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ ಸಂವಿಧಾನ, ಆಡಳಿತ ಮತ್ತು ನಾಗರಿಕ ಸಮಾಜ, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರು ಕಾಂಗ್ರೆಸ್ ಸಿದ್ಧಾಂತ, ಪತ್ರಕರ್ತ ದಿಲಾವರ ಮಾಧ್ಯಮ ನಿರ್ವಹಣೆ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ ನ್ಯಾಯ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯ ಕುರಿತು ಉಪನ್ಯಾಸ ನೀಡಿದರು.

Share this article