ವಿದ್ಯುತ್ ಕಳೆದುಕೊಂಡ ವೃದ್ಧೆಗೆ ಗ್ರಾ.ಪಂ. ಸದಸ್ಯ ಸಕಾಲಿಕ ನೆರವು

KannadaprabhaNewsNetwork | Published : May 27, 2024 1:14 AM

ಸಾರಾಂಶ

ವಿದ್ಯುತ್ ಇಲ್ಲದೆ ಅತಂತ್ರ ಸ್ಥಿತಿಗೆ ಸಿಲುಕಿದ್ದ ಅಂಧ ಮಗನೊಂದಿಗೆ ಜೀವನ ನಡೆಸುತ್ತಿದ್ದ ವೃದ್ಧೆಗೆ ಪಂಚಾಯಿತಿ ಸದಸ್ಯರೋರ್ವರು ಸಕಾಲಿಕ ನೆರವಾಗಿದ್ದಾರೆ. ಅವರ ಮಧ್ಯಪ್ರವೇಶದಿಂದಾಗಿ ವಿದ್ಯುತ್ ಸಂಪರ್ಕವನ್ನು ಪುನರ್ ಕಲ್ಪಿಸಿದ ಘಟನೆ ಭಾನುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ವಿದ್ಯುತ್ ಸಂಪರ್ಕವಿದ್ದ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗಿ 10 ದಿನಗಳಿಂದ ವಿದ್ಯುತ್ ಇಲ್ಲದೆ ಅತಂತ್ರ ಸ್ಥಿತಿಗೆ ಸಿಲುಕಿದ್ದ ಅಂಧ ಮಗನೊಂದಿಗೆ ಜೀವನ ನಡೆಸುತ್ತಿದ್ದ ವೃದ್ಧೆಗೆ ಪಂಚಾಯಿತಿ ಸದಸ್ಯರೋರ್ವರು ಸಕಾಲಿಕ ನೆರವಾಗಿದ್ದಾರೆ. ಅವರ ಮಧ್ಯಪ್ರವೇಶದಿಂದಾಗಿ ವಿದ್ಯುತ್ ಸಂಪರ್ಕವನ್ನು ಪುನರ್ ಕಲ್ಪಿಸಿದ ಘಟನೆ ಭಾನುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಕನಾರ್ಟಕ ವಿಕಾಸ ಗ್ರಾಮೀಣ್ ಬ್ಯಾಂಕ್ ಬಳಿಯ ನಿವಾಸಿ ರಾಜಮಣಿ(೭೫) ಮತ್ತವರ ಕಣ್ಣು ಕಾಣದ ಮಗ ತಂಗವೇಲು ವಾಸಿಸುತ್ತಿರುವ ಮನೆಯು ಹಲವು ಮನೆ ಮನೆ ನಿವೇಶನಗಳ ಮಧ್ಯದಲ್ಲಿದ್ದು, ಮನೆಯ ವಿದ್ಯುತ್ ಸಂಪರ್ಕದ ತಂತಿಯು ಮೇ ೧೬ರಂದು ಕಡಿತಕ್ಕೊಳಗಾಗಿತ್ತು. ಬಳಿಕ ಈ ಸಂಪರ್ಕವನ್ನು ಪುನರ್ ಸ್ಥಾಪಿಸಲು ಸುತ್ತಮುತ್ತಲ ನಿವಾಸಿಗರು ಆಕ್ಷೇಪವನ್ನು ವ್ಯಕ್ತಪಡಿಸಿದರು. ವೃದ್ಧೆಯ ಮನವಿಗೂ ಸ್ಥಳೀಯ ಪಂಚಾಯಿತಿ ಸದಸ್ಯ ಯು.ಟಿ. ತೌಸಿಫ್ ಅವರ ಮನವಿಗೂ ಸ್ಪಂದನೆ ದೊರೆಯದೆ ನಿರಂತರ ಹತ್ತು ದಿನಗಳ ಕಾಲ ವೃದ್ಧೆಯ ಕುಟುಂಬ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿಯೇ ಕಾಲ ಕಳೆಯಿತು.ಈ ಸೂಕ್ಷ್ಮತೆಯ ಬಳಿಕ ಮೆಸ್ಕಾಂ ಅಧಿಕಾರಿಗಳ ಸಹಕಾರ ಪಡೆದು ಭೂಮಿಯ ಅಂತರ್ಗತ ಕೇಬಲ್ ಅಳವಡಿಸಿ ಭಾನುವಾರ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕವನ್ನು ಪುನರಪಿ ಒದಗಿಸುವಲ್ಲಿ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್‌ ಯಶಸ್ವಿಯಾದರು.ಈ ಬಗ್ಗೆ ಪ್ರತಿಕ್ರಿಯಿಸಿದ ವೃದ್ಧೆ, ನನ್ನ ಕುರುಡ ಮಗನಿಗೆ ಕತ್ತಲೆ ಯಾವುದು? ಬೆಳಕು ಯಾವುದು? ಎನ್ನುವುದೇ ತಿಳಿದಿಲ್ಲ. ಆತನನ್ನು ಸಾಕಿ ಸಲಹುವ ನನಗೆ ಬೆಳಕಿನ ಅಗತ್ಯತೆ ಇತ್ತು. ನನ್ನ ಮನೆಯ ವಿದ್ಯುತ್ ಸಂಪರ್ಕದ ತಂತಿ ಕಡಿತಗೊಂಡ ಬಳಿಕ ಹತ್ತು ದಿನಗಳ ಕಾಲ ಕತ್ತಲೆಯಲ್ಲೇ ದಿನ ಕಳೆದೆ. ಸುತ್ತಮುತ್ತಲ ಮನೆಯವರ ಭೂಮಿಯಿಂದ ಹಾದು ಹೋಗುವಂತೆ ವಿದ್ಯುತ್ ಸಂಪರ್ಕ ಸಾಧಿಸಲು ಯಾಚಿಸಿದೆನಾದರೂ ಯಾರೂ ಸ್ಪಂದಿಸಲಿಲ್ಲ. ನನ್ನ ವಿನಂತಿಯ ಮೇರೆಗೆ ನನ್ನ ಪರವಾಗಿ ಪಂಚಾಯಿತಿ ಸದಸ್ಯ ತೌಸೀಫ್‌, ಎಲ್ಲರಲ್ಲಿ ವಿನಂತಿಸಿದ್ದರೂ ಅವರ ಮಾತಿಗೂ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಮೆಸ್ಕಾಂ ಅಧಿಕಾರಿಗಳ ಸಹಕಾರ ಪಡೆದು ಭೂಮಿಯ ಅಡಿಯಿಂದ ಕೇಬಲ್ ಎಳೆದು ನನ್ನ ಮನೆಗೆ ವಿದ್ಯುತ್ ಒದಗಿಸಿದ್ದಾರೆ. ಹತ್ತು ದಿನಗಳಿಂದ ಕಾಡಿದ ಸಮಸ್ಯೆ ನಿವಾರಣೆಯಾಗಿದೆ ಎಂದು ಕಣ್ಣೀರು ಸುರಿಸುತ್ತಾ ಹೇಳಿದರು.ಅಂಧ ಮಗನೊಂದಿಗೆ ಜೀವನ ನಡೆಸುತ್ತಿರುವ ವೃದ್ಧೆಯ ಸಂಕಷ್ಟಕ್ಕೆ ಸ್ಪಂದಿಸಿದ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್‌ ಅವರ ಕಾರ್ಯ ವೈಖರಿಗೆ ನಾಗರಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

Share this article