ಧರ್ಮ, ಸಂಸ್ಕೃತಿ ಉಳಿವಿಗೆ ಮಕ್ಕಳಿಗೆ ರಾಮಾಯಣ ಓದಿಸಿ: ಡಾ.ಪ್ರಭಾಕರ ಭಟ್‌ ಕಲ್ಲಡ್ಕ

KannadaprabhaNewsNetwork |  
Published : Jan 20, 2024, 02:03 AM IST
ರಾಮಾಯಣ ಪಾರಾಯಣ | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾ​ರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ವ್ಯಾಪ್ತಿಯನ್ನು ಒಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ಜ. 21ರ ವರೆಗೆ ನಗರದ ಸಂಘನಿಕೇತನದಲ್ಲಿ ಹಮ್ಮಿಕೊಂಡ ‘ಅಖಂಡ ರಾಮಾಯಣ ಪಾರಾಯಣ’ಕ್ಕೆ ಶುಕ್ರವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಪ್ರತಿಯೊಂದು ಕುಟುಂಬದ ಕೇಂದ್ರ ಬಿಂದು ತಾಯಂದಿರು. ಅವರಿಂದಲೇ ಧರ್ಮ, ಸಂಸ್ಕೃತಿ ಉಳಿದಿದೆ. ಆದ್ದರಿಂದ ದೇಶದ ಸಂಸ್ಕೃತಿ, ಅಸ್ಮಿತೆಯ ಪ್ರತೀಕವಾದ ರಾಮಾಯಣವನ್ನು ಮಕ್ಕಳಿಗೆ ಓದಿಸುವ ಮೂಲಕ ಮುಂದಿನ ಪೀಳಿಗೆಯ ನಾಗರಿಕತೆ ಉಳಿಸುವ ಜವಾಬ್ದಾರಿ ಇದೆ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾ​ರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ವ್ಯಾಪ್ತಿಯನ್ನು ಒಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ಜ. 21ರ ವರೆಗೆ ನಗರದ ಸಂಘನಿಕೇತನದಲ್ಲಿ ಹಮ್ಮಿಕೊಂಡ ‘ಅಖಂಡ ರಾಮಾಯಣ ಪಾರಾಯಣ’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ರಾಮ ಎಂದರೆ ನಮ್ಮ ಧರ್ಮ, ಸಂಸ್ಕೃತಿ, ಜೀವನ ಮೌಲ್ಯ. ದೇಶದ ಸತ್ವ ಮತ್ತು ತತ್ವ, ದೇಶದ ಅಸ್ಮಿತೆ. ರಾಮಾಯಣ ಪಾರಾಯಣದ ಮೂಲಕ ಶ್ರೀರಾಮನನ್ನು ಅಧ್ಯಯನ ಮಾಡಬೇಕು. ಯುವಜನತೆಗೆ ರಾಮಾಯಣದ ಬಗ್ಗೆ ಜ್ಞಾನ ಇರಬೇಕು. ರಾಮನನ್ನು ತಿಳಿಯುವುದು ಅಂದರೆ ನಮ್ಮ ನಾಗರಿಕತೆಯನ್ನು ತಿಳಿಯುವುದು ಎಂದರ್ಥ ಎಂದರು.ನಮ್ಮ ದೇಶಕ್ಕಾದ ಅಪಮಾನ ಸ್ವಾತಂತ್ರ್ಯ ಬಳಿಕ ಸರಿ ಹೋಗಬೇಕಿತ್ತು. ಆದರೆ ಇಂದು ದೇಶದೆಲ್ಲೆಡೆ ಆನಂದ, ಖುಷಿ ಮನೆ ಮಾಡಿದೆ. ಒಂದೊಮ್ಮೆ ರಾಮಜನ್ಮ ಭೂಮಿಯಿಂದ ರಾಮನನ್ನು ಓಡಿಸಲಾಗಿತ್ತೋ ಅಲ್ಲೇ ಶ್ರೀ ರಾಮನ ಪಟ್ಟಾಭಿಷೇಕ ನಡೆಯುತ್ತಿದೆ. ವಾಲ್ಮಿಕಿ ರಾಮಾಯಣ ಪುರಾಣವಲ್ಲ, ಅದು ಚರಿತ್ರೆ ಎಂದರು.ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಂಘಟನಾ ಮಂತ್ರಿ ದಿನೇಶ್‌ ಕಾಮತ್‌ ಮಾತನಾಡಿ, ರಾಮ ಭಕ್ತಿ ರಾಷ್ಟ್ರಶಕ್ತಿಯಾಗಿದೆ. ಸುಭಾಷಿತಗಳು ಕೇವಲ ವಾಕ್ಯವಲ್ಲ. ಜೀವನದ ಏರಿಳಿತನ್ನು ಎದುರಿಸುವ ಸಾಮರ್ಥ್ಯ ಇದರಿಂದ ಸಿಗುತ್ತದೆ ಎಂದು ತಿಳಿಸಿದರು.

ಸಂಸ್ಕೃತ ಭಾರತಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್‌ ಡಾ. ವಿಶ್ವಾಸ್‌ ಮಾತನಾಡಿ, ಭಾರತೀಯರಾದ ನಮಗೆ ರಾಮಾಯಣ, ಮಹಾಭಾರತ ಎರಡು ಕಣ್ಣುಗಳು. ಅವುಗಳಿಗೆ ಎಂದೂ ಸಾವಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಗ್ರಂಥವನ್ನು ಕೆಲವರು ಮೂಲೆಗುಂಪು ಮಾಡುತ್ತಿರುವುದು ಬೇಸರದ ಸಂಗತಿ. ರಾಮಾಯಣ, ಮಹಾಭಾರತ ಇತಿಹಾಸವೂ ಹೌದು, ಪುರಾಣವೂ ಹೌದು. ರಾಮಾಯಣ ಪಾರಾಯಣ, ವೇದ ಪಾರಾಯಣ ಭಿನ್ನವಲ್ಲ ಎಂದರು.

ಸಂಸ್ಕೃತ ಭಾರತೀ ಪ್ರಾಂತ ಸಂಪರ್ಕ ಪ್ರಮುಖ್‌ ಸತ್ಯನಾರಾಯಣ ಕೆ.ವಿ. ಸ್ವಾಗತಿಸಿದರು. ವಿಭಾಗ ಸಂಯೋಜಕ ನಟೇಶ ವಂದಿಸಿದರು. ಸಂಸ್ಕೃತ ಪ್ರಾಧ್ಯಾಪಕ ಡಾ. ಉಮಾಮಹೇಶ್ವರ ನಿರೂಪಿಸಿದರು.

51 ಗಂಟೆಗಳ ಕಾಲ ಅಖಂಡ ಪಠಣ: ಶುಕ್ರವಾರ ಮಧ್ಯಾಹ್ನ ಆರಂಭವಾದ ರಾಮಾಯಣ ಪಾರಾಯಣ ಜ.21ರ ಸಂಜೆ 4ರ ವರೆಗೆ ನಡೆಯಲಿದೆ. ವಾಲ್ಮೀಕಿ ರಾಮಾಯಣದ 24,000 ಸಂಸ್ಕೃತ ಶ್ಲೋಕಗಳನ್ನು ಗಾಯತ್ರಿ ಮಂತ್ರದ ಬೀಜಾಕ್ಷರಾನುಸಾರವಾಗಿ 24 ತಂಡಗಳನ್ನಾಗಿ ವಿಂಗಡಿಸಿ, ಸುಮಾರು 51 ಗಂಟೆಗಳಿಗೂ ಅಧಿಕ ಕಾಲ ಅಖಂಡ ಪಾರಾಯಣ ನಡೆಯಲಿದೆ. ಪಾರಾಯಣದಲ್ಲಿ ಪ್ರತೀ ತಂಡದಲ್ಲಿ ಕನಿಷ್ಠ 20 ಮಂದಿ ಸುಮಾರು 1,000 ಶ್ಲೋಕಗಳನ್ನು ಪಠಿಸಲಿ​ದ್ದಾರೆ ಎಂದು ಡಾ.ವಿಶ್ವಾಸ್‌ ಹೇಳಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ