ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಾತನಾಡೋಕೆ ಬರಲ್ಲ, ಅಡುಗೆ ಮಾಡೋಕೆ ಲಾಯಕ್ಕು ಎಂಬುದಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕರಿಗೆ ಸರಿಯಾದ ಉತ್ತರ ನೀಡುವ ಮೂಲಕ ಹೆಣ್ಣು ಅಡುಗೆ ಮಾಡುವುದಕ್ಕಷ್ಟೇ ಅಲ್ಲ, ಸಂಸತ್ತಿನಲ್ಲಿ ಅಧಿಕಾರವನ್ನೂ ಮಾಡುತ್ತಾರೆ ಎಂಬುದನ್ನು ಸಾಬೀತುಪಡಿಸಲು ದಾವಣಗೆರೆ ಕ್ಷೇತ್ರದ ಫಲಿತಾಂಶ ಉತ್ತರವಾಗಬೇಕು ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣ, ವಿದ್ಯಾನಗರ ಉದ್ಯಾನವರ ಸೇರಿದಂತೆ ವಿವಿಧೆಡೆ ಪ್ರಚಾರ, ಮತದಾರರ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ನಂತರ ಮಾತನಾಡಿದ ಅವರು, ನಾವು ಯಾರನ್ನೂ ಕೀಳಾಗಿ ನೋಡಬಾರದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಶಕ್ತಿ, ಸಾಮರ್ಥ್ಯ ಇರುತ್ತದೆ. ವೀರರಾಣಿ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ಮಹಿಳೆಯರು, ವೀರ ವನಿತೆಯರು ತಮ್ಮ ಸಾಧನೆಯಿಂದಲೇ ಇಂದಿಗೂ ಜನಮಾನಸದಲ್ಲಿ ಜೀವಂತ ಇದ್ದಾರೆ ಎಂದರು.
ಚಿಕ್ಕಮಕ್ಕಳಿಗೆ ರಾಜ ಮಹಾರಾಜರು, ಮಹನೀಯರು, ವೀರನಾರಿಯರು, ಸಾಧಕಿಯರ ಸಾಹಸ ಕಥೆಗಳನ್ನು ಹೇಳುತ್ತೇವೆ. ಮಹಿಳೆ ಅಡುಗೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದರೆ, ಇತಿಹಾಸದ ಪುಟಗಳಲ್ಲಿ ಅಂತಹ ಯಾರೊಬ್ಬರೂ ಇರುತ್ತಿರಲಿಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರ ಫಲಿತಾಂಶ ಉತ್ತರವಾಗುವಂತೆ ಮತದಾರರು ಬಿಜೆಪಿಗೆ ಬೆಂಬಲಿಸಿ, ಆಶೀರ್ವದಿಸಬೇಕು ಎಂದು ಗಾಯತ್ರಿ ಸಿದ್ದೇಶ್ವರ ಕೋರಿದರು.ಬ್ಯಾಟಿಂಗ್-ಬೌಲಿಂಗ್:
ಅನಂತರ ಅಭ್ಯರ್ಥಿ ಗಾಯತ್ರಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕ- ಯುವತಿಯರ ಜೊತೆ ಕ್ರಿಕೆಟ್ ಆಡಿ, ಬ್ಯಾಟಿಂಗ್, ಬೌಲಿಂಗ್ ಮೂಲಕ ಗಮನ ಸೆಳೆದದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿದ್ಯಾರ್ಥಿ, ಯುವಜನರು, ಮಹಿಳೆಯರು, ಹಿರಿಯ ನಾಗರಿಕರಿಗೆ ಮನವರಿಗೆ ಮಾಡಿದರು. ಅನಂತರ ವಿದ್ಯಾನಗರದ ವಾಯುವಿಹಾರಿಗಳ ಜೊತೆಗೆ ಹೆಜ್ಜೆ ಹಾಕುತ್ತಲೇ ಸಮಾಲೋಚನೆ ಮಾಡಿ, ಮತಯಾಚಿಸಿದರು.ಜಗಳೂರು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ಟಿ.ಗುರುಸಿದ್ದನಗೌಡರ ದಾವಣಗೆರೆ ನಿವಾಸಕ್ಕೆ ತೆರಳಿದ ಗಾಯತ್ರಿ ಸಿದ್ದೇಶ್ವರ ಅವರು ಆರೋಗ್ಯ ವಿಚಾರಿಸಿ, ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಹಿರಿಯ ಮುಖಂಡ ಗುರುಸಿದ್ದನಗೌಡರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿದರು.
ಉದ್ಯಮಿ ರಮೇಶ, ಮಂಜುನಾಥ ಕಾಲೇಜು ಕಾರ್ಯದರ್ಶಿ ದ್ಯಾಮಣ್ಣನವರ್, ಪಾಲಿಕೆ ಸದಸ್ಯ ರಾದ ವೀಣಾ ನಂಜಪ್ಪ, ಗೀತಾ ಬಿ.ದಿಳ್ಯಪ್ಪ, ಕುಮಾರ ಜುವೆಲರ್ಸ್‌ನ ಸಿ.ಕೆ.ಸಿದ್ದಪ್ಪ, ಶ್ಯಾಗಲೆ ಮಹದೇಪ್ಪ, ಕಸಾಪ ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ಮಹೇಶ, ಡಾ.ಗಾಯತ್ರಿ, ಆಂಜನೇಯ ಬಡಾವಣೆಯ ಅರುಣ್, ಛಾಯಾ ಶ್ರೀಧರ್, ವಿಜಯಕುಮಾರ, ಅನೇಕರು ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಅಭಿಮಾನಿಗಳ ನಿವಾಸಕ್ಕೆ ತೆರಳಿ, ಮತಯಾಚಿಸಿ, ಬೆಂಬಲ ಕೋರಿದರು.ಮಾಜಿ ಶಾಸಕ ಬಸವರಾಜ ನಾಯ್ಕ್ , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಬಿ.ಎಸ್. ಜಗದೀಶ, ಲಕ್ಷ್ಮಣ, ಪಾಲಿಕೆ ಸದಸ್ಯರಾದ ಶಿವಕುಮಾರ, ಪ್ರೇಮಮ್ಮ ನನ್ನಯ್ಯ, ಮುಂಖಡರು, ಕಾರ್ಯಕರ್ತರು ಇದ್ದರು.
- - - -30ಕೆಡಿವಿಜಿ1: ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಿರಿಯ ಮಹಿಳೆಯ ಬಳಿ ಮತಯಾಚಿಸಿದರು. -30ಕೆಡಿವಿಜಿ2, 3: ದಾವಣಗೆರೆ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.