ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮತ್ತವರ ಬೆಂಬಲಿಗರು ನನ್ನನ್ನು ಆಶೀರ್ವದಿಸಿದ ಮಠಾಧೀಶರಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ಸತ್ಯ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮಠಾಧೀಶರಿಗೆ ಬೆದರಿಕೆ ಹಾಕಿದ್ದೇನೆ ಎಂಬುದು ಸುಳ್ಳು. ಈ ಬಗ್ಗೆ ಈಶ್ವರಪ್ಪ ಅವರು ಚಂದ್ರಗುತ್ತಿಗೆ ಬಂದು ಆಣೆ-ಪ್ರಮಾಣ ಮಾಡಲಿ ಎಂಬ ಬಿ.ವೈ.ರಾಘವೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಜೀವನದಲ್ಲಿ ಇಂತಹ ಆಣೆ ಪ್ರಮಾಣ ಮಾಡಿಲ್ಲ. ಇದರಲ್ಲಿ ನಂಬಿಕೆಯೂ ನನಗಿಲ್ಲ. ಆದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಭಾವ ಬರಬಾರದು ಎಂಬ ಕಾರಣಕ್ಕೆ ಅವರ ಆಹ್ವಾನಕ್ಕೆ ನಾನು ಸಿದ್ಧ ಎಂದು ಈಶ್ವರಪ್ಪ ಹೇಳಿದರು.
ಚಂದ್ರಗುತ್ತಿ ಅಥವಾ ಅಯೋಧ್ಯೆಯೇ ಆಗಲಿ, ನಾನು ಬಂದು ಪ್ರಮಾಣ ಮಾಡಲು, ಗಂಟೆ ಹೊಡೆಯಲು ಸಿದ್ಧ. ಆದರೆ, ರಾಘವೇಂದ್ರ ಅಥವಾ ಅವರ ಬೆಂಬಲಿಗರು ಸಾಧು ಸಂತರಿಗೆ, ನನ್ನ ಬೆಂಬಲಿಸಿದ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿ ನೋವು ಕೊಟ್ಟಿಲ್ಲ ಎಂದು ಪ್ರಮಾಣ ಮಾಡಬೇಕು. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ. ಸುಳ್ಳು ಹೇಳಿದ್ದನ್ನು ಒಪ್ಪಿಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ವಾಟ್ಸಪ್ ಮೂಲಕ ನನಗೆ ಕರೆ ಮಾಡಿದ್ದರು. ಆದರೆ, ನಾನು ಕರೆ ಸ್ವೀಕರಿಸಲಿಲ್ಲ.ಬಳಿಕ ವಾಪಸ್ ಕಾಲ್ ಮಾಡುವಂತೆ ಮೆಸೆಜ್ ಹಾಕಿದರು. ಅದಕ್ಕೂ ನಾನು ಪ್ರತಿಕ್ರಿಯಿಸಲಿಲ್ಲ. ಬಹುಶಃ ಟಿಕೆಟ್ ನೀಡುವ ಉದ್ದೇಶದಿಂದ ಕರೆ ಮಾಡಿರಬಹುದು. ಆದರೆ, ಬಿಜೆಪಿ ನನ್ನ ತಾಯಿ. ಹೀಗಾಗಿ ಬೇರೆ ಪಕ್ಷದಿಂದ ಸ್ಪರ್ಧಿಸುವ ಆಲೋಚನೆ ಕೂಡ ಮಾಡಲಾರೆ ಎಂದು ಈಶ್ವರಪ್ಪ ಹೇಳಿದರು.