ಹಾವೇರಿ ವಿವಿ ಮುಚ್ಚುವ ತೀರ್ಮಾನ ರದ್ದುಪಡಿಸಲು ಒತ್ತಾಯ

KannadaprabhaNewsNetwork | Published : Feb 26, 2025 1:00 AM

ಸಾರಾಂಶ

ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ ಅದರ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು.

ರಾಣಿಬೆನ್ನೂರು: ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಲು ನಿರ್ಧರಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ರದ್ದುಪಡಿಸಿ ಯಥಾಸ್ಥಿತಿಯಲ್ಲಿ ವಿಶ್ವವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಹೋರಾಟ ಸಮಿತಿ ಸದಸ್ಯರ ನಿಯೋಗ ಮಂಗಳವಾರ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿತು.ಹೋರಾಟ ಸಮಿತಿಯ ಬಸವರಾಜ ಪೂಜಾರ ಮಾತನಾಡಿ, ಯಾವುದೇ ಅನುದಾನ ಬರದಿರುವ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಗತ್ಯ ಅನುದಾನ ನೀಡಿ ವಿವಿ ಬಲಪಡಿಸುವ ಬದಲು ಅದನ್ನು ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ ಅದರ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.ಮನವಿ ಸ್ವೀಕರಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮ ಜಿಲ್ಲೆಗೆ ಅವಶ್ಯಕತೆಯಿರುವ ಹಾವೇರಿ ವಿಶ್ವವಿದ್ಯಾಲಯ ಉಳಿಸಲು ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಬಳಿಗೆ ಹೋಗಿ ಅಗತ್ಯ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಏಳುಕೊಟೆಪ್ಪ ಪಾಟೀಲ, ಉಡಚಪ್ಪ ಮಾಳಗಿ, ಮಲ್ಲೇಶಪ್ಪ ಮದ್ಲೇರ, ಕೃಷ್ಣಾ ರಾಠೋಡ, ಹನುಮಂತ ಹಲಗೇರಿ, ಯಲ್ಲಪ್ಪ ಮತ್ತಿತರರಿದ್ದರು.ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ, ಪ್ರಯಾಣಿಕರು ಪಾರು

ಗುತ್ತಲ: ಟ್ರಾನ್ಸ್‌ಫರ್ಮರ್ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ ವಾಯವ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಸಮೀಪದ ಬೆಳವಿಗಿ ಗ್ರಾಮದ ಬಳಿ ನಡೆದಿದೆ. ಅದೃಷ್ಟಾವಶಾತ್ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಾನ್ಸ್‌ಫರ್ಮರ್ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ತಕ್ಷಣ ಬಸ್ ಸಿಬ್ಬಂದಿ ಹಾಗೂ ಪ್ರಾಯಾಣಿಕರು ಬಸ್ ಇಳಿದು ಹೊರಬಂದರು. ಹೀಗಾಗಿ ಯಾವುದೇ ರೀತಿಯಾದ ಪ್ರಾಣಹಾನಿಯಾಗಿಲ್ಲ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article