ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲು ಒತ್ತಾಯ

KannadaprabhaNewsNetwork | Published : Sep 19, 2024 1:51 AM

ಸಾರಾಂಶ

ರಾಮನಗರ: ಉದ್ದೇಶ ಪೂರಕವಾಗಿ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಪೊಲೀಸ್ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಗಾಯಾಳು ಆಕಾಶ್ ಗೌತಮ್ ತಾಯಿ ನಾಗರತ್ನ ತಿಳಿಸಿದರು.

ರಾಮನಗರ: ಉದ್ದೇಶ ಪೂರಕವಾಗಿ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಪೊಲೀಸ್ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಗಾಯಾಳು ಆಕಾಶ್ ಗೌತಮ್ ತಾಯಿ ನಾಗರತ್ನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.11ರಂದು ಸಂಜೆ ಬಾರ್ ನಲ್ಲಿದ್ದ ತನ್ನ ಮಗ ಆಕಾಶ್ ಗೌತಮ್ ಮೇಲೆ ಗುಡ್ಡೆ ವೆಂಕಟೇಶ್ ಪುತ್ರ ಪುನೀತ್ ಅಲಿಯಾಸ್ ಮೀಸೆ ಪುನಿ, ಬಾಲಗೆರೆಯ ಪ್ರತಾಪ್ ಅಲಿಯಾಸ್ ಸೋನು ಸೇರಿದಂತೆ ಇತರರು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇಷ್ಟಾದರು ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.

ಆಕಾಶ್ ಗೌತಮ್ ನ ಬಲಗೈ ತೋಳಿನ ಮೂಳೆ ಮುರಿದಿದ್ದು, ಗಾಜಿನ ಬಾಟಲಿಯಿಂದ ಹೊಡೆದಿದ್ದರಿಂದ ಮುಖ ಹಾಗೂ ಮೂಗಿಗೆ ರಕ್ತ ಗಾಯವಾಗಿದೆ. ಆತನಿಗೆ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರು ಮಿಂಟೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಪ್ರಯತ್ನ ನಡೆದಿರುವ ಕೃತ್ಯ ಬಾರಿನಲ್ಲಿರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೂ ಐಜೂರು ಠಾಣೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಆಕಾಶ್ ಗೌತಮ್ ಸಹೋದರ ಅಕ್ಷಯ್ ಗೌತಮ್ ನೀಡಿದ ದೂರನ್ನು ತಿರುಚಿ ಸ್ಟೇಷನ್ ಬೇಲ್ ಸಿಗುವ ರೀತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಯತ್ನ ನಡೆದಿದ್ದರೂ ಐಪಿಸಿ 307 ಕಲಂ ಅನ್ನು ಬಳಸಿಲ್ಲ. ಇದರಲ್ಲಿ ಪೊಲೀಸರ ಕರ್ತವ್ಯ ಲೋಪವೂ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಈ ವಿಚಾರವಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಅವರು ಠಾಣೆ ಸಬ್ ಇನ್ಸ್ ಪೆಕ್ಟರ್ ಗೆ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದರೂ ಆರೋಪಿಗಳ ಬಂಧನ ಆಗಿಲ್ಲ. ಈಗ ಮತ್ತೆ ಪುನೀತ್ ತನ್ನ ಸಹಚರರೊಂದಿಗೆ ಆಕಾಶ್ ಗೌತಮ್‌ನನ್ನು ಕೊಲೆ ಮಾಡುವುದಾಗಿ ನಮ್ಮ ಮನೆ ಬಳಿಯೇ ರಾಜಾರೋಷವಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ ಎಂದು ಆರೋಪಿಸಿದರು.

ದಲಿತ ನಾಯಕ ಎಂದು ಹೇಳಿಕೊಂಡು ಸಮಾಜ ಉದ್ಧಾರ ಮಾಡಲು ಹೊರಟಿರುವ ಗುಡ್ಡೆ ವೆಂಕಟೇಶ್ ದಾರಿ ತಪ್ಪಿರುವ ತನ್ನ ಮಗ ಪುನೀತ್ ಗೆ ಬುದ್ಧಿ ಹೇಳುತ್ತಿಲ್ಲ. ಬದಲಿಗೆ ಸಮಾಜದಲ್ಲಿ ಮತ್ತಷ್ಟು ಅಶಾಂತಿ ಸೃಷ್ಟಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗ ಜೈಲು ಪಾಲಾಗುವುದನ್ನು ತಪ್ಪಿಸಲು ಜನಪ್ರತಿನಿಧಿಗಳ ಮೂಲಕ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನಾಗರತ್ನ ದೂರಿದರು.

‍‍ವಕೀಲ ರವಿಕುಮಾರ್ ಮಾತನಾಡಿ, ಆಕಾಶ್ ಗೌತಮ್ ಮೇಲೆ ಕೊಲೆ ಪ್ರಯತ್ನ ನಡೆದಿದೆ. ದೂರನ್ನು ತಿರುಚಿ ಪ್ರಕರಣ ದಾಖಲಿಸಿರುವ ಪೊಲೀಸರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ. ಕೂಡಲೇ ದೂರನ್ನು ತಿರುಚಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಮುಖಂಡ ಶಿವಣ್ಣ ಮಾತನಾಡಿ, ದಲಿತ ನಾಯಕ ಎಂದು ಹೇಳಿಕೊಂಡು ಗುಡ್ಡೆ ವೆಂಕಟೇಶ್ ಜೀವನ ನಡೆಸುತ್ತಿದ್ದಾರೆ. ಅವರಂತೆ ನಾವೂ ಕೂಡ ದಲಿತ ಸಮುದಾಯಕ್ಕೆ ಸೇರಿದವರು. ದಲಿತರ ಪರ ಹೋರಾಟ ಮಾಡುವ ಗುಡ್ಡೆ ವೆಂಕಟೇಶ್ ಹಲ್ಲೆಗೊಳಗಾಗಿರುವ ಆಕಾಶ್ ಗೌತಮ್ ಗೆ ನ್ಯಾಯ ಕೊಡಿಸಲು ಹೋರಾಟ ನಡೆಸಲೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಿರಿಯಪ್ಪ, ಅಶ್ವತ್ಥ್, ವೆಂಕಟೇಶ್ ಇತರರಿದ್ದರು.

18ಕೆಆರ್ ಎಂಎನ್ 4.ಜೆಪಿಜಿ

ರಾಮನಗರದಲ್ಲಿ ಗಾಯಾಳು ಆಕಾಶ್ ಗೌತಮ್ ತಾಯಿ ನಾಗರತ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article