ರಾಣಿಬೆನ್ನೂರು: ರಾಜ್ಯ ಹೆದ್ದಾರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳರ ವೃತ್ತ ನಿರ್ಮಿಸಲು ಒತ್ತಾಯ, ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಮನವಿ, ಹಕ್ಕುಪತ್ರ, ಗೃಹಲಕ್ಷ್ಮಿ ಹಣಕ್ಕಾಗಿ ಸಾರ್ವಜನಿಕರ ಮೊರೆ ಇವು ಶನಿವಾರ ನಗರದ ಎಪಿಎಂಸಿ ರೈತ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಲ್ಲಿಕೆಯಾದ ಅರ್ಜಿಗಳು.
ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎರಡೂವರೆ ವರ್ಷ ಕಳೆದರೂ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದರು. ಇದು ಸಚಿವ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಅವರಿಗೆ ತೀವ್ರ ಮುಜುಗರ ಉಂಟು ಮಾಡಿತು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪ್ರಜಾಸೇವಾ ಆಂದೋಲನದಲ್ಲಿ ಇದನ್ನು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ ಎಂದರು. ಆದರೆ ಇದರಿಂದ ಸಮಾಧಾನಗೊಳ್ಳದ ಗುತ್ತಿಗೆದಾರರು ನಾವು ಕೆಲಸ ಮಾಡಿ ಎರಡೂವರೆ ವರ್ಷಗಳಾಗಿವೆ. ಆದರೂ ಇದುವರೆಗೂ ಹಣ ಬಿಡುಗಡೆಯಾಗದ ಕಾರಣ ನಿಮ್ಮ ಮುಂದೆ ಅಳಲು ತೊಡಿಕೊಂಡಿರುವೆ ಎಂದರು.ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ, ವಿದ್ಯುತ್ ಕಂಬಗಳಿದ್ದರೂ ದೀಪಗಳಿಲ್ಲ, ಆಶ್ರಮ ಸಮಿತಿ ಮನೆಗಳ ಹಕ್ಕು ಪರಭಾರೆ ಮಾಡುವ ಕುರಿತು ನಿವಾಸಿಗಳಾದ ನಂದೀಶ ಕೋರಿಶೆಟ್ಟರ, ರಮೇಶ ಜಾಧವ ಹಾಗೂ ಮಾಲತೇಶ ಅಂತರವಳ್ಳಿ ಮನವಿ ಪತ್ರ ಸಲ್ಲಿಸಿದರು.
ಹಾಲಿನ ದರದ ವಿಚಾರ: ಕೆಎಂಎಫ್ ಅಧಿಕಾರಿಗಳಿಗೆ ತರಾಟೆ
ಈ ವಿಚಾರವಾಗಿ ಕೆಎಂಎಫ್ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರಲ್ಲದೆ ಹಾಲಿನ ದರದ ಸಮಸ್ಯೆ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಯಕಲಾಸಪುರ ಗ್ರಾಮದ ಗೀತಾ ಈಳಗೇರ ಹಾಗೂ ಈರಮ್ಮ ಜಾನಗೇರಿ ಎಂಬ ಮಹಿಳೆಯರು ಕಳೆದ ಎರಡು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮನೆ, ಜಮೀನು ಇಲ್ಲ. ಜಿಎಸ್‌ಟಿ ನೋಂದಣಿಯೂ ಇಲ್ಲ. ಆದರೂ ಯೋಜನೆಯ ಹಣ ದೊರೆಯುತ್ತಿಲ್ಲ. ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದೇವೆ. ನಮಗೆ ನ್ಯಾಯ ಒದಗಿಸಬೇಕು. ನಮಗೆ ಯಾರು ಹಣ ನೀಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾಧಿಕಾರಿ ಈ ಸಮಸ್ಯೆ ರಾಜ್ಯದಲ್ಲಿಯೇ ಆಗಿದೆ, ಈ ಕುರಿತು ಕ್ರಮವಹಿಸಲಾಗುವುದು ಎಂದರು ಉತ್ತರಿಸಿದರು.