
ಕಾರಟಗಿ: ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ರಾಜ್ಯ ಸರ್ಕಾರ ಈ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧವಿದೆ. ಕನ್ನಡ ನಾಡು-ನುಡಿಯ ಸೇವೆಗೆ ರಾಜ್ಯ ಸರ್ಕಾರ ಕಂಕಣಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲೆಯ ಸಂಶೋಧಕರು, ಸಾಹಿತಿಗಳು ಆಗಿರುವ ಡಾ. ಶರಣಬಸಪ್ಪ ಕೋಲಕಾರ ಅವರ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಜಾತ್ರೆ ನಡೆಯುತ್ತಿರುವುದು ಸಂತಷದ ಸಂಗತಿ. ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಕುವೆಂಪು ಅವರು ತಮ್ಮ ಬರಹದಲ್ಲಿ ಸಮಾನತೆಯ ಸಂದೇಶ ನೀಡಿದ್ದಾರೆ. ಇದೆಲ್ಲವನ್ನೂ ನಾವು ನಮ್ಮ ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕವಿ, ಕತೆಗಾರರು, ಕಾದಂಬರಿಕಾರರು, ಸಂಶೋಧಕರು ಹಾಗೂ ಇನ್ನಿತರ ಎಲ್ಲ ಬರಹಗಾರರಿಂದ ವಾಸ್ತವ ಸತ್ಯಗಳ ಚರ್ಚೆಯಾಗಬೇಕು. ಇಂತಹ ಸಾಹಿತ್ಯಿಕ ವೇದಿಕೆಗಳಿಂದಲೂ ವಾಸ್ತವ ಸತ್ಯವನ್ನು ಜನರ ಮುಂದಿಡುವ ಕಾರ್ಯವಾಗಬೇಕು ಎಂದು ಸಚಿವರು ಸಲಹೆ ಮಾಡಿದರು.ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ, ಇಂತಹ ಕನ್ನಡದ ಕೆಲಸಗಳು ನಿತ್ಯ ನಿರಂತರ ನಡೆಯಬೇಕು. ವಿಶೇಷವಾಗಿ ವಿದ್ಯಾರ್ಥಿ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.
ಮನಸು ಬೆಳಗುವ ಕೆಲಸ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಸಾಂಸ್ಕೃತಿಕ ಮನಸಗಳನ್ನು ಬೆಳಗುವ ಕಾರ್ಯಕ್ರಮ ಇದಾಗಿದೆ ಎಂದು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.
ಅಭಿನಂದನಾ ಗ್ರಂಥ ಬಿಡುಗಡೆ: ಲೇಖಕರಾದ ಡಾ. ಶಿವಕುಮಾರ ಮಾಲಿಪಾಟೀಲ ಹಾಗೂ ಡಾ. ಮೈಲಾರಪ್ಪ ಬೂದಿಹಾಳ ಅವರ ಸಂಪಾದಕತ್ವದ ಡಾ. ಶರಣಬಸಪ್ಪ ಕೋಲಕಾರ ಅವರ ಜೀವನ ಸಾಧನೆಗಳ ಅವಲೋಕನದ ಮೌನ ಸಾಧಕ ಪುಸ್ತಕ ಹಾಗೂ ಡಾ. ಶಾರದಾ ಪಾಟೀಲ ಅವರು ಬರೆದ ಡಾ. ಶರಣಬಸಪ್ಪ ಕೋಲ್ಕಾರ ಬದುಕು - ಬರಹ ಸಂಶೋಧನೆಯ ಕೃತಿಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಮರುಳಸಿದ್ದಯ್ಯ ಸ್ವಾಮಿ ಹಿರೇಮಠ, ವೀರಭದ್ರ ಶರಣರು, ಸಿದ್ಧೇಶ್ವರ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ, ಶರಣಪ್ಪ ಕೋಟ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕೆ.ಎನ್. ಪಾಟೀಲ್, ಜಿ. ಯಂಕನಗೌಡ, ಚೆನ್ನಬಸಪ್ಪ ಸುಂಕದ್, ಶರಣೇಗೌಡ ಬೂದುಗುಂಪಾ, ಶಿವರೆಡ್ಡಿ ನಾಯಕ, ಶ್ರೀಕಾಂತ ಈಡೇಗೇರ್, ನಾಗರಾಜ ಬಿಲ್ಗಾರ್, ಅಮರೇಶ ಕುಳಗಿ, ಮಂಜುನಾಥ ಮೇಗೂರು, ದೊಡ್ಡಬಸವರಾಜ ಬೂದಿ, ಪಾವನಿ ವೆಂಕಟೇಶ ಭಜಂತ್ರಿ ನೃತ್ಯಗೈದರು. ಮಂಜುನಾಥ ಚಿಕೇನಕೊಪ್ಪ, ಮಹೆಬೂಬ್ ಕಿಲ್ಲೇದಾರ, ಅಮರೇಶಗೌಡ, ಕಾರ್ಯಕ್ರಮ ನಿರ್ವಹಿಸಿದರು.