ಹಾವೇರಿ: ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಖಾಸಗಿಕರಣಗೊಳಿಸುವುದನ್ನು ಕೈಬಿಡಬೇಕು, ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಜಿಲ್ಲೆಯಲ್ಲಿ 2002- 03ರಿಂದ ಅಕ್ಷರ ದಾಸೋಹ ಬಿಸಿಯೂಟ ಜಾರಿಗೆ ಬಂದಿದ್ದು, 3900ಕ್ಕಿಂತಲೂ ಹೆಚ್ಚು ಬಿಸಿಯೂಟ ತಯಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತ ವೇತನ, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಆದಾಗ್ಯೂ ಇವರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ಸಾಗಿಸುವುದು ಅತ್ಯಂತ ಕಷ್ಟದಾಯಕವಾಗಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಜಿಲ್ಲಾ ಅಧ್ಯಕ್ಷ ಜಿ.ಡಿ. ಪೂಜಾರ, ರಾಜೇಶ್ವರಿ ದೊಡ್ಡಮನಿ, ನಿರ್ಮಲಾ ಬಂಕಾಪುರಮಠ, ಸರೋಜಮ್ಮ ಹೀರೆಮಠ, ಲತಾ ಹೀರೆಮಠ, ಮಹಾದೇವಿ ಬಂಡಿ, ರೇಖಮ್ಮ ದನ್ನೂರು, ಶೈಲಜಾ ಹರನಗಿರಿ ಸೇರಿದಂತೆ ನೂರಾರು ಬಿಸಿಯೂಟ ಕಾರ್ಯರ್ತೆಯರು ಪಾಲ್ಗೊಂಡಿದ್ದರು.
ಹಾವೇರಿ: ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಮೇಕ್ ವೆಲ್‌ಫೇರ್ ಫೌಂಡೇಶನ್ ಹತ್ತು ವರ್ಷ ಪೂರೈಸಿದ ಹಿನ್ನೆಲೆ ಜಿಲ್ಲೆಯ ಸವಣೂರು ತಾಲೂಕು ಕಳಲಕೊಂಡ ಗ್ರಾಮದ ಎಸ್‌ವಿಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ. 23ರಂದು ಸಂಜೆ 4ಕ್ಕೆ ಅಕ್ಷರೋತ್ಸವ ಎಂಬ ಶೈಕ್ಷಣಿಕ ಸಮಾವೇಶ ಹಮ್ಮಿಕೊಂಡಿದೆ ಎಂದು ಮೇಕ್ ವೆಲ್‌ಫೇರ್ ಫೌಂಡೇಶನ್ ವ್ಯವಸ್ಥಾಪಕ ಕೆ.ಎಂ. ಮುಸ್ತಫಾ ನಈಮಿ ಹಝ್ರತ್ ತಿಳಿಸಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಮೇಕ್ ವೆಲ್‌ಫೇರ್ ಫೌಂಡೇಶನ್‌ನ ಅಕ್ಷರೋತ್ಸವ ಅಂಗವಾಗಿ ಫೆ. 21 ಮತ್ತು 22ರಂದು ಕಳಲಕೊಂಡ, ಜಲ್ಲಾಪುರ, ಮಂತ್ರೋಡಿ, ಕಮಲದೊಡ್ಡಿ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮಗಳಲ್ಲಿ ಅಕ್ಷರ ಸಂಚಾರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಮರಳಿಗೆ ಶಾಲೆಗೆ ಸೇರ್ಪಡೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.