ಹೊಸಪೇಟೆ: ಪಿಎಫ್, ಆರ್‌ಡಿಎ ಕಾಯ್ದೆ, ಎನ್‌ಪಿಎಸ್, ಯುಪಿಎಸ್ ಪದ್ಧತಿ ರದ್ದುಗೊಳಿಸಿ, ನಿಶ್ಚಿತ ಹಳೆಯ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದಿಂದ ಸೆ. 26ರಂದು ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರಂಗನಾಥ ಹವಾಲ್ದಾರ್ ತಿಳಿಸಿದ್ದರು.
ಆಡಳಿತ ಸುಧಾರಣೆ ಆಯೋಗ-2ರ ನೌಕರ ವಿರೋಧಿ ಶಿಫಾರಸುಗಳನ್ನು ಹಿಂಪಡೆಯುವುದು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. ಐದು ವರ್ಷಗಳಿಗೊಮ್ಮೆ ನಿಯಮಿತವಾಗಿ ವೇತನ ಪರಿಷ್ಕರಣೆ ಮಾಡುವುದು, ತಡೆ ಹಿಡಿದಿರುವ 19 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ ಊಟದ ವಿರಾಮದ ವೇಳೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್ಲ ಸರ್ಕಾರಿ ನೌಕರರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಒಕ್ಕೂಟದ ಮುಖಂಡರಾದ ಮರಡಿ ಜಂಬಯ್ಯ ನಾಯಕ, ನಾಗರಾಜ ಪತ್ತಾರ, ಬಿಸಾಟಿ ತಾಯಪ್ಪ ನಾಯಕ ಮತ್ತಿತರರಿದ್ದರು.