ಪ್ರತಿ ಟನ್ ಕಬ್ಬಿಗೆ ₹3 ಸಾವಿರ ದರ ನೀಡಲು ಒತ್ತಾಯ, ರೈತರ ಪ್ರತಿಭಟನೆ

KannadaprabhaNewsNetwork |  
Published : Dec 03, 2024, 12:30 AM IST
ಮುಂಡರಗಿ ತಾಲೂಕಿನ ಗಂಗಾಪೂರ ಬಳಿ ಇರುವ ವಿಜಯನಗರ ಸಕ್ಕರೆ ಕಾರ್ಖಾನೆ ಎದುರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಪ್ರತಿ ಟನ್ ಕಬ್ಬಿಗೆ 3 ಸಾವಿರ ದರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪ್ರತಿ ಟನ್ ಕಬ್ಬಿಗೆ ರೈತರಿಗೆ ₹3 ಸಾವಿರ ನೀಡಬೇಕು ಹಾಗೂ ಎಥಿನಾಲ್ ತಯಾರಿಸಲು ಸಕ್ಕರೆ ಕಾರ್ಖಾನೆಯವರು ನೇರವಾಗಿ ರೈತರಿಂದ ಗೋವಿನಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.

ಮುಂಡರಗಿ: ಕಟಾವು ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ ರೈತರಿಗೆ ₹3 ಸಾವಿರ ನೀಡಬೇಕು ಹಾಗೂ ಎಥಿನಾಲ್ ತಯಾರಿಸಲು ಸಕ್ಕರೆ ಕಾರ್ಖಾನೆಯವರು ನೇರವಾಗಿ ರೈತರಿಂದ ಗೋವಿನಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಈಗಾಗಲೇ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಕಟಾವು ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ನೀಡಲಾಗುತ್ತಿದೆ. ಅದರಂತೆ ಇಲ್ಲಿಯೂ ನೀಡಬೇಕು. ಪ್ರಸ್ತುತ ವರ್ಷದಿಂದ ಸಕ್ಕರೆ ಕಾರ್ಖಾನೆಯಲ್ಲಿ ಎಥಿನಾಲ್ ಘಟಕ ಪ್ರಾರಂಭಿಸಿದ್ದು, ಅದಕ್ಕೆ ಬೇಕಾಗುವ ಗೋವಿನಜೋಳವನ್ನು ಬೇರೆ ವ್ಯಾಪಾರಸ್ಥರ ಹತ್ತಿರ ಕೊಂಡುಕೊಳ್ಳುವ ಬದಲು ನೇರವಾಗಿ ರೈತರಿಂದ ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ ಎನ್ನುವುದು ಎಲ್ಲ ರೈತ ಅಭಿಪ್ರಾಯವಾಗಿದೆ ಎಂದರು.

ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಡಿಜಿಎಂ ಮಂಜುನಾಥ ಮಾತನಾಡಿ, ಕಬ್ಬಿನ ಕಾರ್ಖಾನೆಗಳ ಲೆಕ್ಕಾಚಾರದ ಪ್ರಕಾರ ಕೆಲವು ಭಾಗಗಳಲ್ಲಿನ ಕೆಲವು ಕಾರ್ಖಾನೆಗಳಲ್ಲಿ ರಿಕವರಿ ಹೆಚ್ಚಾಗಿ ಬರುತ್ತದೆ. ಅಲ್ಲಿನ ರಿಕವರಿ ಮೇಲೆ ಆ ಕಾರ್ಖಾನೆಗಳು ರೈತರಿಗೆ ದರ ನೀಡುತ್ತಾ ಬಂದಿವೆ. ನಮ್ಮ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ 9ರಿಂದ 10ರಷ್ಟು ರಿಕವರಿ ಬರುತ್ತಿದ್ದು, ಅದಕ್ಕೆ ತಕ್ಕಂತೆ ನಾವು ಕಟಾವು ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿ ₹2550 ನೀಡುತ್ತಿದ್ದೇವೆ. ಕಾರ್ಖಾನೆಗೆ ಒಂದು ಟನ್ ಕಬ್ಬು ಕಟಾವು ಮಾಡಿಸಿ ಸಾಗಣೆ ಮಾಡಿಸಲು ಸುಮಾರು ₹850 ಖರ್ಚು ಬರುತ್ತದೆ ಎಂದು ಹೇಳಿದರು.

ಕಾರ್ಖಾನೆಯಿಂದ ನೇರವಾಗಿ ರೈತರಿಂದ ಗೋವಿನಜೋಳ ಖರೀದಿಗೆ ಅವಕಾಶವಿಲ್ಲ. ಯಾವುದಾದರೊಂದು ಸಂಘ-ಸಂಸ್ಥೆಗೆ ರೈತ ಬೆಳೆದ ಮಾಲನ್ನು ಕೊಡಬೇಕಾದರೆ ಅದಕ್ಕೆ ಸರ್ಕಾರದ ಪರವಾನಗಿ ಹಾಗೂ ಜಿಎಸ್‌ಟಿ ಬೇಕಾಗುತ್ತದೆ. ಶೇ. 14ರಷ್ಟು ತೇವಾಂಶ ಇರಬೇಕು ಎನ್ನುವ ನಿಯಮವಿದೆ. ಅದಕ್ಕೆ ಒಪ್ಪಿಗೆ ಇದ್ದರೆ ಮಾತ್ರ ರೈತರಿಂದ ಗೋವಿನಜೋಳ ಖರೀದಿಸಲು ಬರುತ್ತದೆ. ನಾವು ನಮ್ಮ ಕಾರ್ಖಾನೆಯಲ್ಲಿ ಕಬ್ಬಿನಿಂದ ಎಥಿನಾಲ್ ತಯಾರಿಸುತ್ತೇವೆ. ಕಬ್ಬು ಕಡಿಮೆ ಇದ್ದಾಗ ಮಾತ್ರ ಗೋವಿನಜೋಳ ಬಳಕೆ ಮಾಡುತ್ತೇವೆ. ಹೀಗಾಗಿ ಕಾರ್ಖಾನೆಗೆ ಹೆಚ್ಚಿನ ಗೋವಿನಜೋಳದ ಅವಶ್ಯಕತೆ ಬೀಳುವುದಿಲ್ಲ ಎಂದರು.

ಕಾರ್ಖಾನೆ ಅಧಿಕಾರಿಯ ಹೇಳಿಕೆಗೆ ಒಪ್ಪದ ರೈತರು ಕಾರ್ಖಾನೆಯ ಎಂಡಿ, ಗದಗ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ರೈತ ಹುಸೇನಸಾಬ್ ಕುರಿ ಮಾತನಾಡಿ, ಈ ಹಿಂದೆ ಒಂದು ಹಂಗಾಮಿಗೆ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಒಟ್ಟು 7 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಕಳೆದ 1-2 ವರ್ಷಗಳಿಂದ ಅದು ಕಡಿಮೆಯಾಗುತ್ತಾ ಬಂದಿದೆ. ಪ್ರಸ್ತುತ ವರ್ಷ ಸುಮಾರು 3 ಲಕ್ಷ ಟನ್‌ಗೆ ಬಂದು ನಿಲ್ಲುವ ಸಾಧ್ಯತೆ ಇದೆ. ಕಾರ್ಖಾನೆಯವರು ರೈತರಿಗೆ ಉತ್ತಮ ಬೆಲೆಯನ್ನು ಕೊಡದಿರುವುದರಿಂದ ರೈತರು ಕಬ್ಬು ಬಿಟ್ಟು ಬೇರೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದು ಸಂಪೂರ್ಣವಾಗಿ ನಿಂತೇ ಹೋಗುತ್ತದೆ. ಹಾಗಾಗುವ ಮೊದಲು ಕಾರ್ಖಾನೆಯವರು ಎಚ್ಚೆತ್ತು ಕಬ್ಬಿಗೆ ಉತ್ತಮ ಬೆಲೆ ನೀಡಬೇಕು ಎಂದರು.

ನಂತರ ಕಾರ್ಖಾನೆಯ ಕಬ್ಬು ವಿಭಾಗದ ಡಿಜಿಎಂ ಮಂಜುನಾಥ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ದಯವಿಟ್ಟು ಪ್ರತಿಭಟನೆ ಹಿಂಪಡೆಯಿರಿ ಎಂದರು. ಆದರೆ ರೈತರು ಪಟ್ಟು ಬಿಡದೇ, ಈ ಕೂಡಲೇ ಎಂಡಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮುಂಡರಗಿ ತಹಸೀಲ್ದಾರ್‌ ಕಚೇರಿಯಲ್ಲಿ ಎಲ್ಲ ರೈತರ ಸಮ್ಮುಖದಲ್ಲಿ ಸಭೆ ಕರೆದು ಈ ಎರಡೂ ಬೇಡಿಕೆಗಳ ಕುರಿತು ಚರ್ಚಿಸಬೇಕು ಎಂದರು.

ನಂತರ ಡಿಜಿಎಂ ಮಂಜುನಾಥ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡಿ ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಸಲು ಒಪ್ಪಿಸುವುದಾಗಿ ಹೇಳಿದರು. ಆನಂತರ ಡಿಜಿಎಂ ಮಂಜುನಾಥ ಅವರಿಗೆ ರೈತರು ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ ಪ್ರತಿಭಟನೆ ಮುಕ್ತಾಯಗೊಳಿಸಿದರು.

ಸಿಬಿಐ ಮಂಜುನಾಥ ಕುಸುಗಲ್ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದ್ದರು. ರೈತರಾದ ಚಂದ್ರಕಾಂತ ಉಳ್ಳಾಗಡ್ಡಿ, ದ್ಯಾಮಣ್ಣ ವಾಲಿಕಾರ, ಹುಚ್ಚಪ್ಪ ಹಂದ್ರಾಳ, ದೇವಪ್ಪ ಚಿಕ್ಕಣ್ಣವರ, ಅಂದಪ್ಪ ಹಂದ್ರಾಳ, ರಾಘು ಕುರಿ, ಶರಣಪ್ಪ ಕಂಬಳಿ, ಈರಣ್ಣ ಶೀರಿ, ದುರುಗಪ್ಪ ಚಿಕ್ಕಣ್ಣವರ, ಸುಭಾಸ ಹಳ್ಯಾಳ, ಅಶೋಕ ಬನ್ನಿಕೊಪ್ಪ, ಭೀಮೇಶ ಬಂಡಿವಡ್ಡರ, ರವಿ ಹಡಪದ, ಶಿವಾನಂದ ದಂಡಿನ, ಶಿವಪ್ಪ ಚಿಕ್ಕಣ್ಣವರ, ಹೇಮಾ ಕಟಗಿ, ಜ್ಯೋತಿ ಹಡಪದ, ಶಾರದಾ ನಂಜಪ್ಪನವರ, ಹುಲಿಗೆವ್ವ ಬೂದಗುಂಪಿ, ಶಾರವ್ವ ಡುಮ್ಮನ್ನವರ, ದ್ಯಾಮವ್ವ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!