ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಗ್ರಾಮದಲ್ಲಿಯೇ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಯನ್ನು(ಎಂಎಸ್‌ಐಎಲ್) ಆರಂಭಿಸಬೇಕು ಎಂದು ಒತ್ತಾಯಿಸಿ ಮಾಲವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.ಮಾಲವಿ ಗ್ರಾಮದ ಮದ್ಯವ್ಯಸನಿಗಳು ಬೇರೆ ಗ್ರಾಮದಿಂದ ಕುಡಿದು ಬರುವಾಗ ಅಪಘಾತಕ್ಕೀಡಾಗಿ ಸಾವುನೋವು ಸಂಭವಿಸುತ್ತವೆ. ಆದ್ದರಿಂದ ಮಾಲವಿ ಗ್ರಾಮದಲ್ಲಿಯೇ ಎಂಎಸ್‌ಐಎಲ್ ಪ್ರಾರಂಭಿಸಬೇಕು. ಮಾಲವಿಯಲ್ಲಿ ಮದ್ಯದಂಗಡಿ ಆರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೋರಾಟ ನಿರತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿ ಎಚ್ಚರಿಸಿದರು.
ಗೊಂದಲ: ಇತ್ತೀಚೆಗೆ ಗ್ರಾಕೂಸ್ ಸಂಘಟನೆಯವರು ಹಾಗೂ ಮಾಲವಿ ಗ್ರಾಮಸ್ಥರು ಮಾಲವಿ ಗ್ರಾಮದಲ್ಲಿ ಎಂಎಸ್‌ಐಎಲ್ ಆರಂಭಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೆ, ಈಗ ಮಾಲವಿ ಗ್ರಾಮದ ಮತ್ತೊಂದು ತಂಡ ಹಾಗೂ ಹರೇಗೊಂಡನಹಳ್ಳಿ, ಕೋಗಳಿ ತಾಂಡ, ನೆಲ್ಕುದ್ರಿ ಗ್ರಾಮಸ್ಥರು ಮಾಲವಿ ಗ್ರಾಮದಲ್ಲಿಯೇ ಮದ್ಯದಂಗಡಿ ಆರಂಭಿಸಬೇಕು ಎಂದು ಒತ್ತಾಯಿಸುತ್ತಿರುವುದು ಗೊಂದಲಕ್ಕೆ ಎಡೆಮಾಡಿದೆ. ಮಾಲವಿ ಗ್ರಾಮದ ಮದ್ಯದಂಗಡಿ ಗೊಂದಲದ ವಿಷಯ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.