ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮಾ.22ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಗೋಣಿಬಸಪ್ಪ, ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್ ಹಾಗೂ ಕನ್ನಡಪರ ಸಂಘಟನೆಗಳ ಪಿ.ವೆಂಕಟೇಶ್ ಮಾತನಾಡಿ, ಭೀಕರ ಬರದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ನೀರು ಹರಿಸಲಾಗುತ್ತಿದೆ. ಈಗಾಗಲೇ ಕಳೆದ 10 ದಿನಗಳಿಂದ ಪ್ರತಿ ದಿನ ಏಳು ಎಂಜಿಡಿ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ ಮುಂದೆ ಬರುವ ಒಳಹರಿವಿನ ಪ್ರಮಾಣವನ್ನು ಪರಿಗಣಿಸಿ, ಉಳಿಕೆ ನೀರಿನ ಲಭ್ಯತೆ ಅನುಸಾರ ನೀರು ಹರಿಸಲು ಸರ್ಕಾರ ಆದೇಶಿಸಿದೆ. ಇದೇ ಆದೇಶವನ್ನು ಇಟ್ಟುಕೊಂಡು ತುಂಗಭದ್ರಾ ಜಲಾಶಯದ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಜಿಂದಾಲ್ ಕಾರ್ಖಾನೆಗೆ ನೀರು ಹರಿಸುತ್ತಿದ್ದಾರೆ ಎಂದು ದೂರಿದರು.ಬೋರ್‌ವೆಲ್ ಕೊರೆದರೂ ನೀರು ಸಿಗದ ಈ ಸಂದರ್ಭದಲ್ಲಿ ಮುಂದೆ ಬರುವ ಒಳಹರಿವಿನ ನಿರೀಕ್ಷೆಯಲ್ಲಿ ನೀರು ಹರಿಸಲು ಹೇಳಿದ್ದಾರೆ. ಈಗಾಗಲೇ ಸ್ಥಳೀಯವಾಗಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ರೈತರಿಗೆ, ಜನ-ಜಾನುವಾರುಗಳಿಗೆ ಸಮಸ್ಯೆಯಾಗುತ್ತಿದೆ. ಬರದ ಸಂದರ್ಭದಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗುತ್ತದೆ. ಹಾಗಾಗಿ ಕೂಡಲೇ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ಜಿಂದಾಲ್ ಕಾರ್ಖಾನೆಗೆ ನೀರು ಸರಬರಾಜು ಮಾಡುತ್ತಿರುವ ಪೈಪ್ ಕತ್ತರಿಸಿ ನೀರು ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.ಟಿಬಿಡ್ಯಾಂ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಜಿಂದಾಲ್ ಗೆ ನೀರು ಹರಿಸುತ್ತಿದ್ದಾರೆ. ಕೇಳಿದರೆ ಮೇಲಧಿಕಾರಿಗಳ ಆದೇಶವನ್ನು ಪಾಲಿಸಬೇಕು. ಹಾಗಾಗಿ ಮಾ.22ರ ವರೆಗೆ ನೀರು ಹರಿಸಲಾಗುವುದು ಎಂದು ಹೇಳುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿಯೇ ಇಲ್ಲ ಎಂದು ಹೇಳುತ್ತಾರೆ. ಶಾಸಕ ಎಚ್.ಆರ್. ಗವಿಯಪ್ಪ ಕೂಡ ಈ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸುವುದಾಗಿ ಹೇಳಿದ್ದಾರೆ. ಅವರಿಂದಲೂ ಸರ್ಕಾರಕ್ಕೆ ಪತ್ರ ಬರೆಸಲಾಗುವುದು. ಹೋರಾಟಕ್ಕೆ ಕೂಡ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ ರೈತರ ಬಗ್ಗೆ ಆಲೋಚಿಸಬೇಕಿತ್ತು. ಇಂತಹ ಭೀಕರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಇದ್ದರೂ ಕಾರ್ಖಾನೆಗೆ ನೀರು ಬಿಡುವ ಬೇಜವಾಬ್ದಾರಿತನ ತೋರುತ್ತಿದೆ. ಆಡಳಿತ ಯಂತ್ರಗಳು ಇಂತಹ ಕಾರ್ಖಾನೆಗಳ ಪರ ಯಾಕೆ ಕೆಲಸ ಮಾಡುತ್ತವೆ. ಇದನ್ನು ವಿರೋಧಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಜಿಂದಾಲ್ ಕಾರ್ಖಾನೆಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮಾ.22ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಜೆಎಸ್‌ಡಬ್ಲು ಎನರ್ಜಿ ಲಿ. ಅವರಿಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಇರುವ ಒಳಹರಿವನ್ನು ಪರಿಗಣಿಸಿ ಒಟ್ಟಾರೆ ಜಲಾಶಯದಲ್ಲಿ ಲಭ್ಯವಾಗುವ ನೀರಿನಲ್ಲಿ, ಉಳಿತಾಯವಾಗುವ ನೀರಿನಲ್ಲಿ ೭ ಎಂಜಿಡಿ ನೀರನ್ನು ಲಭ್ಯತೆಯ ಅನುಸಾರ ಹರಿಸಲು ಕ್ರಮ ವಹಿಸುವಂತೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದು, ಇದಕ್ಕೆ ಉಪಮುಖ್ಯಮಂತ್ರಿ ಅನುಮೋದಿಸಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಗುಜ್ಜಲ್ ಗಣೇಶ್, ಖಲಂದರ್, ಅಂಜಿನಪ್ಪ, ಬಂದಿ ಭರಮಪ್ಪ, ಸೋಮಣ್ಣ, ನಾಗಯ್ಯ, ಬಸವರಾಜ, ಹನುಮಂತ, ಕುಮಾರ್, ಗುಜ್ಜಲ್ ಮಾರುತಿ ಇದ್ದರು.