ಕನ್ನಡಪ್ರಭ ವಾರ್ತೆ ಕಲಬುರಗಿ
ಅಫಜಲ್ಪುರ ಪಟ್ಟಣದ ಸಾರ್ವಜನಿಕರು, ವ್ಯಾಪಾರಸ್ಥರು, ಉದ್ದಿಮೆದಾರರು, ವರ್ತಕರ ಸಂಘದ ಮುಖ್ಯಸ್ಥರು, ವಾಹನ ಚಾಲಕರು, ಔಷದ ಮಳಿಗೆ ವ್ಯಾಪಾರಸ್ಥರು, ಆಟೋಮೊಬೈಲ್ಸ್ ಅಂಗಡಿ ಮಾಲೀಕರು, ಆಟೋ ಸಂಘದವರು ಸೇರಿದಂತೆ ವಿವಿಧ ಸ್ತರದ ಸಂಘಟನೆಗಳವರು, ಹೋರಾಟಗಾರರು ಪಕ್ಷಭೇದ ಮರೆತು ಭೀಮಾ ನದಿಗೆ ನೀರು ಹರಿಸುವ ಸಲುವಾಗಿ ಆರಂಭವಾಗಿರುವ ಹೋರಾಟದಲ್ಲಿ ಒಂದಾದರಲ್ಲದೆ ಒತ್ತಡ ಹೆಚ್ಚುವಂತಾಗಲು ಸಂಪೂರ್ಣ ಬಂದ್ ಇರುವಂತೆ ನೋಡಿಕೊಂಡರು.
ಬಹುತೇಕ ಸಂಘಟನೆಗಳ ಮುಖ್ಯಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸ್ವಯಂಪ್ರೇರಿತರಾಗಿ ಭೀಮಾ ನದಿಗಾಗಿ ನಡೆದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಈ ಹೋರಾಟದಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಅಫಜಲ್ಪುರ ಮುಖ್ಯರಸ್ತೆ, ಬಸ್ ನಿಲ್ದಾಣ, ಕಲಬುರಗಿ- ಅಫಜಲ್ಪುರ ರಸ್ತೆಯಲ್ಲಿನ ಮಳಿಗೆ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುವ ಮೂಲಕ ಜನತೆ ನೀರಿಗಾಗಿ ನಡೆದಿರುವ ಹೋರಾಟಕ್ಕೆ ಬೆಂಬಲಿಸಿದರು. ಬೆಳಗ್ಗೆಯಿಂದಲೇ ಅಫಜಲ್ಪುರದಲ್ಲಿ ರಸ್ತೆಗಳಲ್ಲಿ ವಾಹನ, ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
ಅಫಜಲ್ಪುರ ಮಳೇಂದ್ರ ಮಠದ ಗುರುಗಳು, ಬಡದಾಳ ಚೆನ್ನಮಲ್ಲೇಶ್ವರ ಶ್ರೀಗಳು ಸೇರಿದಂತೆ ಅನೇಕರು ಹೋರಾಟದ ಸ್ಥಳದಲ್ಲಿ ಪಾಲ್ಗೊಂಡು ಭೀಮಾ ನದಿಗೆ ನೀರು ಬಿಟ್ಟು ಜನ- ಜಾನುವಾರು ಜೀವ ಉಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಅಮರಣಾಂತ ಉಪವಾಸದಿಂದ ನಾಟೀಕಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡಿದ್ದರಿಂದ ಇವರ ಆರೋಗ್ಯ, ದೇಹಸ್ಥಿತಿ ಮೇಲೆ ನಿಗಾ ಇಟ್ಟಿರುವ ವೈದ್ಯರ ತಂಡ ಹೋರಾಟದ ಟೆಂಟ್‌ನಲ್ಲಿಯೇ ಆ್ಯಂಬುಲೆನ್ಸ್ ಸಮೇತ ಬೀಡುಬಿಟ್ಟಿದೆ. ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹೋರಾಟಗಾರರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.