ಅನೈತಿಕ ಚಟುವಟಿಕೆ ನಿಗ್ರಹಕ್ಕೆ ಕ್ರಮ ವಹಿಸಲು ಒತ್ತಾಯ

KannadaprabhaNewsNetwork | Published : Oct 4, 2024 1:06 AM

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಅವುಗಳ ಬಗ್ಗೆ ಗ್ರಾಪಂ ಕ್ರಮ ಜರುಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗದಗ: ಗ್ರಾಮದ ಶೈಕ್ಷಣಿಕ ಪರಿಸರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನೈತಿಕ ಚಟುವಟಿಕೆಯ ತಾಣಗಳಾಗಿದ್ದು, ಅವುಗಳ ಬಗ್ಗೆ ಗ್ರಾಪಂ ಕ್ರಮ ಜರುಗಿಸಿ, ಗ್ರಾಮದ ಹಿತ ಕಾಪಾಡಬೇಕು ಎಂದು ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

ಕಳೆದ ಹಲವು ದಿನಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಗೊಂಡು ಖಾಲಿ ಇರುವ ಕಟ್ಟಡದಲ್ಲಿ ಅಪ್ರಾಪ್ತರಿಂದ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಈ ಬಗ್ಗೆ ವೈದ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ನಾಗಮ್ಮ ಹಾಲಿನವರ ದೂರಿದರು.

ಇನ್ನ ಬಿ.ಎಚ್. ಪಾಟೀಲ ಕಾಲೇಜ್, ಸರ್ಕಾರಿ ಶಾಲೆ ಮೈದಾನಗಳಲ್ಲಿ ರಾತ್ರಿ 8ರಿಂದ 10ರ ವರೆಗೆ ಗ್ರಾಮದ ಪ್ರಭಾವಿ ವ್ಯಕ್ತಿಗಳೇ ಮದ್ಯಪಾನ, ಧೂಮಪಾನ ಮಾಡಿ ಮದ್ಯದ ಬಾಟಲಿಗಳನ್ನು ಅಲ್ಲಿ ಬಿಟ್ಟು ಶಿಕ್ಷಣ ಪರಿಸರವನ್ನು ಹಾಳು ಮಾಡುತ್ತಿದ್ದು, ಪ್ರತಿದಿನ ಪೊಲೀಸ್ ಗಸ್ತು ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಬಸವರಾಜ ಮುಳ್ಳಾಳ ಇತರರು ಒತ್ತಾಯಿಸಿದರು.

ಮನರೇಗಾ ಕಾಮಗಾರಿ ಕ್ರಿಯಾ ಯೋಜನೆಯನ್ನು ಜಮೀನು, ಹಳ್ಳ, ಕೊಳ್ಳಗಳಿಗೆ ರೂಪಿಸುವ ಬದಲು ಗ್ರಾಮದ ಶಾಲೆ, ಕಾಲೇಜ್, ಕೆರೆಗಳ ಸುತ್ತಮುತ್ತಲಿನ ಪರಿಸರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮಂಜುನಾಥ ತಡಹಾಳ ಆಗ್ರಹಿಸಿದರು.

ತುಂಗಭದ್ರಾ ನದಿಯಿಂದ ಗ್ರಾಮದ ಹಾಲಗೊಂಡ ಬಸವೇಶ್ವರ ಕೆರೆ, ದಂಡಿನ ದುರ್ಗಾದೇವಿ ಕೆರೆಯ ತುಂಬಿಸಲು ಗ್ರಾಪಂ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಬೇಕು. ಇದರಿಂದ ನೀರಾವರಿ ಜಮೀನುಗಳಿಗೆ ಅಂತರ್ಜಲ ವೃದ್ಧಿ, ಪ್ರಾಣಿ ಪಕ್ಷಿ ,ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ರೈತ ಮುಖಂಡ ವೆಂಕಟೇಶ ದೊಂಗಡೆ ಇತರರು ಆಗ್ರಹಿಸಿದರು.

ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇವೆ ನೀಡಲು ಬಂದಿದ್ದ ಆ್ಯಂಬುಲೆನ್ಸ್ ವಾಹನವು ಗದಗ ಜಿಮ್ಸ್‌ನಲ್ಲಿ ಕಳೆದ 6 ತಿಂಗಳಿಂದ ಸೇವೆ ನೀಡುತ್ತಿದೆ. ಇದರಿಂದ ಇಲ್ಲಿಯ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗ್ರಾಪಂ ಕ್ರಮ ಜರುಗಿಸಿ, ಆ್ಯಂಬುಲೆನ್ಸ್ ಮರಳಿ ತರಿಸಿ, ತುರ್ತು ರೋಗಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮರಿಯಪ್ಪ ವಡ್ಡರ ಒತ್ತಾಯಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಬರುವ ಮತ್ತು ಹೋಗುವ ಸಮಯ ಗೊತ್ತಾಗುತ್ತಿಲ್ಲ, ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಪಂ ಸದಸ್ಯ ಲಕ್ಷ್ಮಣ ಗುಡಸಲಮನಿ ದೂರಿದರು.

2024-25ನೇ ಸಾಲಿನ ಮನೇರೆಗಾ ಮತ್ತು 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ರೂಪಿಸುವ ಮತ್ತು ನೋಂದಾವಣಿ ಮಾಡುವ ಕಾಮಗಾರಿಯ ಹೆಸರು, ಸ್ಥಳ ವಿವರಿಸಿದರು.

ವೈದ್ಯಾಧಿಕಾರಿ ಅಮೃತ ಹರಿದಾಸ, ರೈತ ಸಂಪರ್ಕ ಅಧಿಕಾರಿ ಈರಣ್ಣ ಗಡಾದ, ಪಶು ವೈದ್ಯಾಧಿಕಾರಿ, ಅಂಗನವಾಡಿ ಮೇಲ್ವಿಚಾರಕಿ ಶಾಹಿದ ಬೇಗಂ ಹತ್ತಿವಾಲೆ ಮಾತನಾಡಿದರು. ಗ್ರಾಪಂ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ತಾಪಂ ಇಒ ಮಲ್ಲಯ್ಯ ಕೊರವನವರ, ಮನೇರೆಗಾ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಇತರರು ಇದ್ದರು. ಎಸ್‌ಡಿಎ ತುಕಾರಾಮ ಹುಲಗಣ್ಣವರ ಸ್ವಾಗತಿಸಿ, ವಂದಿಸಿದರು.1 ಕೆಜಿ ಪ್ಲಾಸ್ಟಿಕ್‌ಗೆ 1 ಕೆಜಿ ಸಕ್ಕರೆ: ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಲು ಸಾರ್ವಜನಿಕರು 1 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿ ಕೊಟ್ಟರೆ 1 ಕೆಜಿ ಸಕ್ಕರೆ ನೀಡಲಾಗುವುದು. ಗ್ರಾಮದಲ್ಲಿ ಪ್ರಮುಖವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಕಸ ವಿಲೇವಾರಿ ಮಾಡಲು ಸಾರ್ವಜನಿಕರು ಹಸಿ ಮತ್ತು ಒಣ ಕಸ ಬೇರ್ಪಡಿಸಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಗಟಾರು, ಸಿಸಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ವ್ಯವಸ್ಥೆಯಿಂದ ಮಾಡಲಾಗುತ್ತಿಲ್ಲ. ನಿಯಮವನ್ನು ಸಡಿಲಿಕೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶಾಲೆಗಳಿಗೆ ಕುಡಿಯುವ ನೀರು, ಶಾಲಾ ಮಕ್ಕಳ ಸಮರ್ಪಕ ಬಸ್ ವ್ಯವಸ್ಥೆ ಮತ್ತು ಆರೋಗ್ಯ ಕೇಂದ್ರಗಳ ಪರಿಸರ ಸ್ವಚ್ಛತೆಗೆ ಕ್ರಮ ಜರುಗಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

Share this article