- ದವನ್ ಕಾಲೇಜು ಬಿಬಿಎ ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರದರ್ಶನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
"ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. " - ಹೀಗೆ ಬೋರ್ಗರೆದ ದನಿ ಮಂಗಳವಾರ ನಗರದ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ನೆರೆದಿದ್ದವರ ಮನಮುಟ್ಟಿತು.ನಗರದ ದವನ್ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಹರಳೆಣ್ಣೆ ಕೊಟ್ರ ಬಸಪ್ಪ ಸರ್ಕಲ್ (ರಾಮ್ ಅಂಡ್ ಕೋ ಸರ್ಕಲ್)ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವಪೀಳಿಗೆಯಲ್ಲಿ, ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರನ್ನು ಬೀದಿನಾಟಕ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.
ದಿಢೀರ್ ಶ್ರೀಮಂತ ಆಗಬೇಕೆನ್ನುವ ಹವಣಿಕೆಗೆ, ವಿದೇಶಿ ಕಂಪನಿಗಳಲ್ಲಿ ಪ್ರಕಟಿಸುವ ಸೌಲಭ್ಯ ಮತ್ತು ಪ್ಯಾಕೇಜ್‌ಗೆ ಮಾರುಹೋದ ಯುವಕನೊಬ್ಬ ತನ್ನ ತಾಯಿ ಬಳಿ ವಿದೇಶದಲ್ಲಿ ನೌಕರಿ ಮಾಡುವ ಆಸೆಯನ್ನು ಹೇಳಿಕೊಳ್ಳುವ ಮತ್ತು ಇದಕ್ಕಾಗಿ ಮಧ್ಯಮ ವರ್ಗದ ಆ ಕುಟುಂಬ ಇತರೆಡೆಯಿಂದ ಸಾಲ ಮಾಡಿ, ಮಗನನ್ನು ವಿದೇಶಕ್ಕೆ ಕಳಿಸುವ ಸನ್ನಿವೇಶ ಮನಕಲಕುವಂತಿತ್ತು.ಮಗ ವಿದೇಶದಲ್ಲಿ ನೆಲೆಗೊಂಡ ನಂತರ ಮಗನೊಂದಿಗೆ ಮಾತನಾಡಲು ಆತನ ಸ್ನೇಹಿತನ ಮೊಬೈಲಿನಿಂದ ಮಾತನಾಡುವ ತಾಯಿ, ಕೆಲಸದ ಒತ್ತಡದಲ್ಲಿ ಸಿಡುಕುವ ಮಗ, ತಾಯಿಯ ಕ್ಷೇಮ- ಸಮಾಚಾರಕ್ಕೆ ಸ್ಪಂದಿಸದಿದ್ದಾಗ ಹಾಸಿಗೆ ಹಿಡಿದು ಒಂದು ದಿನ ಸಾವನ್ನಪ್ಪುತ್ತಾಳೆ. ಸ್ನೇಹಿತನಿಂದ ತಾಯಿಯ ಅಗಲಿಕೆಯ ಸುದ್ದಿ ತಿಳಿದ ಮಗನಿಗೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತಾನು ದುಡಿಯುತ್ತಿರುವ ಕಂಪನಿ ನಿರಾಕರಿಸಿದಾಗ ತನ್ನ ದೇಶ, ಭಾಷೆ, ಸಂಸ್ಕೃತಿಯನ್ನು ಬಿಟ್ಟು ಅನ್ಯ ದೇಶದಲ್ಲಿ ಬಂದು ತಪ್ಪು ಮಾಡಿದೆ ಎಂಬ ಭಾವ ಮೊಳೆಯುತ್ತದೆ.
ಇಂತಹ ಭಾವಗಳ ಬಿಂಬಿಸುವ ಬೀದಿನಾಟಕ ಮೂಲಕ ಬಿಬಿಎ ತೃತೀಯ ವರ್ಷದ ವಿದ್ಯಾರ್ಥಿಗಳು ಹೆತ್ತವರು, ದೇಶಪ್ರೇಮ ಹಾಗೂ ಮಾನವೀಯತೆಯಿಂದ ಬದುಕಬೇಕಾದ ಅಗತ್ಯ, ಅನಿವಾರ್ಯತೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಬೀದಿನಾಟಕಕ್ಕೆ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ನೆರೆದಿದ್ದವರಿಂದ ಉತ್ತಮ ಪ್ರತಿಕ್ರಿಯೆಯೂ ಮೂಡಿಬಂದಿತು.- - -
-28ಕೆಡಿವಿಜಿ36, 37ಃ:ದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್‌ನಲ್ಲಿ ದವನ್ ಕಾಲೇಜು ವಿದ್ಯಾರ್ಥಿಗಳು "ವಿದೇಶದಲ್ಲಿ ಉದ್ಯೋಗ ವ್ಯಾಮೋಹ " ಕುರಿತು ಬೀದಿನಾಟಕ ಪ್ರದರ್ಶಿಸಿ ನಾಗರಿಕರ ಮನಗೆದ್ದರು.