ಸುಹಾಸ್‌ ಶೆಟ್ಟಿ ಹತ್ಯೆಗೆ ವಿದೇಶಿ ಫಂಡಿಂಗ್‌ ?

KannadaprabhaNewsNetwork |  
Published : May 06, 2025, 12:19 AM ISTUpdated : May 06, 2025, 08:33 AM IST
ಸುಹಾಸ್‌ ಆರೋಪಿಗಳ ಭರ್ಜರಿ ಪಾರ್ಟಿ | Kannada Prabha

ಸಾರಾಂಶ

ಮೇ 1ರಂದು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಹರಿದು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮಂಗಳೂರು : ಮೇ 1ರಂದು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಹರಿದು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುಹಾಸ್ ಶೆಟ್ಟಿಯ ಹತ್ಯೆ ಹಿಂದೆ ಹಲವಾರು ಕಾಣದ ಕೈಗಳ ಕೈವಾಡವಿರುವ ಶಂಕೆ ಹೆಚ್ಚಾಗಿದೆ. ಈ ಕುರಿತು ತನಿಖೆ ಮುಂದುವರಿಸುತ್ತಿರುವ ಪೊಲೀಸರು ಅನೇಕ ಬ್ಯಾಂಕ್ ಖಾತೆಗಳ ಪರಿಶೀಲನೆ ಆರಂಭಿಸಿದ್ದಾರೆ. ಕೇವಲ 5 ಲಕ್ಷ ರು.ಗೆ ಸುಹಾಸ್‌ರನ್ನು ಹತ್ಯೆ ಮಾಡಲಾಯಿತಾ?, ಹತ್ಯೆಗೆ ವಿದೇಶದಿಂದ ಹಣ ಹರಿದು ಬಂದಿದೆಯಾ ಎಂಬುದೂ ಸೇರಿದಂತೆ ಎಲ್ಲಾ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸುಹಾಸ್ ಶೆಟ್ಟಿಯನ್ನು ಮುಗಿಸಲೇಬೇಕು ಎಂದು ನಿರ್ಧರಿಸಿದ್ದ ಪ್ರಮುಖ ಆರೋಪಿ ಸಫ್ವಾನ್‌, ಹತ್ಯೆ ನಡೆಸಲು ನೆರವು ನೀಡುವಂತೆ ಅನೇಕರನ್ನು ಸಂಪರ್ಕಿಸಿದ್ದ. ಈ ನಿಟ್ಟಿನಲ್ಲಿ ಮುಜಾಮಿಲ್ ಮೂಲಕ ವಿದೇಶದಲ್ಲಿರುವ ಹಲವರಿಂದ ಹಣಕಾಸು ನೆರವು ಪಡೆದಿರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಸಂಭಾವ್ಯ ಜೈಲ್ - ಬೇಲ್ ನೆರವಿಗಾಗಿ ಸಫ್ವಾನ್‌ ಅನೇಕರ ಮುಂದೆ ಕೈಚಾಚಿದ್ದ. ಹತ್ಯೆಯಾದ ಕೂಡಲೇ ಸರೆಂಡರ್ ಆಗುವ ಬಗ್ಗೆಯೂ ಈ ಹಂತಕರ ತಂಡ ಚರ್ಚೆ ನಡೆಸಿತ್ತು ಎಂದು ಹೇಳಲಾಗಿದೆ.

‘ಬಿ ಪ್ಲ್ಯಾನ್‌’ ಕೂಡ ರೆಡಿಯಾಗಿತ್ತು!:

ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್‌ನ ತಮ್ಮ ಆದಿಲ್‌ 3 ಲಕ್ಷ ರು. ಹಣ ನೀಡಿದ್ದ. ಅಲ್ಲದೆ ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರು ಬಳಕೆಗೆ ಸೂಚಿಸಿದ್ದ. ಅಕಸ್ಮಾತ್ ಸುಹಾಸ್ ತಪ್ಪಿಸಿಕೊಂಡರೆ, ‘ಪ್ಲ್ಯಾನ್ ಬಿ’ಯನ್ನು ಕೂಡ ತಂಡ ಸಿದ್ಧಪಡಿಸಿತ್ತು. ಹಂತಕರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತು ಎಂದು ಹೇಳಲಾಗುತ್ತಿದೆ.

ಮೂರು ತಿಂಗಳ ಹಿಂದೆಯೇ ಡೆಡ್ಲಿ ಟೀಮ್ ಸಿದ್ಧಪಡಿಸಿದ್ದ ಸಫ್ವಾನ್, ಸುಹಾಸ್ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಈ ವೇಳೆ ಸುಹಾಸ್ ಬಜಪೆಗೆ ಬರುವ ಬಗ್ಗೆ ಸ್ಥಳೀಯ ಆರೋಪಿ ಅಜರುದ್ದೀನ್‌ ಮಾಹಿತಿ ನೀಡಿದ್ದ. ಸುಹಾಸ್‌ ಎಷ್ಟು ಗಂಟೆಗೆ ಹೊರಡುತ್ತಾನೆ, ಅವನೊಂದಿಗೆ ಯಾರಿದ್ದಾರೆ ಎಂಬುದನ್ನು ಸಫ್ವಾನ್‌ಗೆ ಅಜರುದ್ದೀನ್‌ ತಿಳಿಸಿದ್ದ. ಸುಹಾಸ್‌ ಹತ್ಯೆಯಾಗುತ್ತಿದ್ದಂತೆ ಅಜರುದ್ದೀನ್‌ ತಲೆ ಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.+++

ಚಿಕ್ಕಮಗಳೂರಲ್ಲಿ ನಡೆದಿತ್ತು

ಸುಹಾಸ್‌ ಹತ್ಯೆಗೆ ಸ್ಕೆಚ್‌?

ಏ. 2 ರಂದು ಹತ್ಯೆಗೆ ಸ್ಕೆಚ್ ರೂಪಿಸಲು ಚಿಕ್ಕಮಗಳೂರಿನ ಕಳಸದ ರೆಸಾರ್ಟ್‌ವೊಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪದಲ್ಲಿ ಬಂಧಿತರಾಗಿರುವ ರಂಜಿತ್‌, ಮುಜಮ್ಮಿಲ್, ನಿಯಾಜ್‌ ರಾತ್ರಿ ವೇಳೆ ಕ್ಯಾಂಪ್ ಫೈರ್ ಹಾಕಿ ಭರ್ಜರಿ ಪಾರ್ಟಿ ಮಾಡಿರುವ ಫೋಟೋಗಳು ಮಾಧ್ಯಮಗಳಿಗೆ ಲಭಿಸಿದೆ. ಈ ಮೂವರ ಜೊತೆ ಇನ್ನೂ ಐದು ಮಂದಿ ಅಪರಿಚಿತರು ಇದ್ದರು ಎಂದು ಹೇಳಲಾಗುತ್ತಿದೆ. ಸುಹಾಸ್‌ ಹತ್ಯೆಗಾಗಿ ಫಾಸಿಲ್ ಸಹೋದರ ಆದಿಲ್‌, 3 ಲಕ್ಷ ರು. ಅಡ್ವಾನ್ಸ್‌ ನೀಡಿದ್ದು, ಅದೇ ಹಣದಲ್ಲಿ ಮೂವರು ಆರೋಪಿಗಳು ಕಳಸದಲ್ಲಿ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೇ ಪಾರ್ಟಿಯಲ್ಲಿ ರಂಜಿತ್‌ನನ್ನು ಮುಜಮ್ಮಿಲ್‌ಗೆ ನಿಯಾಜ್‌ ಪರಿಚಯ ಮಾಡಿಸಿದ್ದ. ಈ ವೇಳೆ ಹತ್ಯೆಗೆ ಸ್ಕೆಚ್‌ ಹಾಕಿರುವ ಬಗ್ಗೆ ಅನುಮಾನ ಪೊಲೀಸರದ್ದು. 

ಸುಖಾನಂದ ಶೆಟ್ಟಿ ಹತ್ಯೆ

ಆರೋಪಿಯೇ ಗೈಡ್‌?

19 ವರ್ಷಗಳ ಹಿಂದೆ, 2006ರ ಡಿ.1ರಂದು ಮಂಗಳೂರಿನ ಕುಳಾಯಿ ಬಳಿ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿಯ ಹತ್ಯೆ ನಡೆದಿತ್ತು. ಕುಳಾಯಿಯ ಮಾರ್ಬಲ್ ಟ್ರೇಡಿಂಗ್ ಕಂಪನಿ ಬಳಿ ಕ್ವಾಲಿಸ್ ವಾಹನದಲ್ಲಿ ಬಂದು ಸುಖಾನಂದ ಶೆಟ್ಟಿ ಹತ್ಯೆ ಮಾಡಲಾಗಿತ್ತು. ಸುಖಾನಂದ ಶೆಟ್ಟಿ ಹತ್ಯೆ ಮಾದರಿಯಲ್ಲೇ ಸುಹಾಸ್ ಶೆಟ್ಟಿಯನ್ನು ಹತ್ಯೆ ನಡೆಸಲಾಗಿದೆ. ಆ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ನಟೋರಿಯಸ್ ನೌಷದ್, ಸುಹಾಸ್ ಶೆಟ್ಟಿ ಕೊಲೆ ಆರೋಪಿ ನಿಯಾಜ್‌ನ ಸಂಬಂಧಿ‌. ಸುಹಾಸ್ ಹತ್ಯೆಗೆ ಮುನ್ನ ನೌಷದ್‌ನನ್ನು ಸಫ್ವಾನ್‌ ತಂಡ ಸಂಪರ್ಕಿಸಿತ್ತು. ಅದೇ ಮಾದರಿಯಲ್ಲಿ ಪ್ಲ್ಯಾನ್ ರೂಪಿಸಲು ನೌಷದ್ ಬಳಿಗೆ ಈ ತಂಡ ಬಂದಿತ್ತು. ಈ ವೇಳೆ ಸಫ್ವಾನ್ ತಂಡಕ್ಕೆ ‌ನೌಷದ್‌, ಗೈಡ್ ಮಾಡಿದ್ದ. ಕಾರುಗಳ ಬಳಕೆ, ಎಂಟ್ರಿ ಮತ್ತು ಎಕ್ಸಿಟ್‌ಗಳ ಬಗ್ಗೆ ತಿಳಿಸಿದ್ದ. ಲೊಕೇಶನ್ ಮ್ಯಾಪ್ ಜೊತೆ ಇಡೀ ಹತ್ಯೆ ಪ್ಲ್ಯಾನ್ ಬಗ್ಗೆ ವಿವರಿಸಿದ್ದ. ಅದರಂತೆಯೇ ಸುಹಾಸ್ ಶೆಟ್ಟಿ ಹತ್ಯೆ ಸ್ಕೆಚ್ ರೂಪುಗೊಂಡಿತ್ತು ಎಂದು ಹೇಳಲಾಗಿದೆ.

ಸುಖಾನಂದ ಶೆಟ್ಟಿ ಹತ್ಯೆ ಕೇಸ್ ನಲ್ಲಿ 23 ಆರೋಪಿಗಳ ಬಂಧನವಾಗಿತ್ತು. ಇದರಲ್ಲಿ ಮೂಲ್ಕಿ ರಫೀಕ್ ಹಾಗೂ ಅತಿಕ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಉಳಿದ ಆರೋಪಿಗಳನ್ನು 2018ರಲ್ಲಿ ಮಂಗಳೂರು ಕೋರ್ಟ್ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆ ಮಾಡಿತ್ತು. ಆ ಬಳಿಕ ಮತ್ತೆ ನೌಷದ್ ಕ್ರಿಮಿನಲ್ ಚಟುವಟಿಕೆಗಳಿಗೆ ಇಳಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

8 ಆರೋಪಿಗಳು ಮೇ 9ರ ತನಕ ಪೊಲೀಸ್‌ ಕಸ್ಟಡಿಗೆ:

ಹತ್ಯೆಯ ಪ್ರಮುಖ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೇ 9ರವರೆಗೆ 8 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿದೆ. ಈ ಮಧ್ಯೆ, ಆರೋಪಿಗಳನ್ನು ಹತ್ಯೆ ನಡೆದ ಬಜಪೆಯ ಕಿನ್ನಿಪದವಿಗೆ ಕರೆದುಕೊಂಡು ಹೋಗಿ, ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ