ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವ ಉದ್ದೇಶದಿಂದ ಪುಟ್ಟಣ್ಣಯ್ಯ ಫೌಂಡೇಷನ್ ಸಹಯೋಗದಲ್ಲಿ ಪಟ್ಟಣದ ಫ್ರೆಂಚ್‌ರಾಕ್ಸ್ ಶತಮಾನೋತ್ಸವ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡ ತಾರಾ ಇಂಗ್ಲಿಷ್ ಲ್ಯಾಟ್ ಅನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪುಟ್ಟಣ್ಣಯ್ಯ ಫೌಂಡೇಷನ್ ಸಂಸ್ಥೆ ಅಧ್ಯಕ್ಷೆ ಸುನೀತ ಪುಟ್ಟಣ್ಣಯ್ಯ ಸೋಮವಾರ ಉದ್ಘಾಟಿಸಿದರು.ಲರ್ನಿಂಗ್ ಮ್ಯಾಟರ್ಸ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ತಾರಾ ಇಂಗ್ಲಿಷ್ ಲ್ಯಾಬ್ ಮೂಲಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವುದನ್ನು ನಮ್ಮ ತಂದೆಯವರ ಹೆಸರಿನ ಪುಟ್ಟಣ್ಣಯ್ಯ ಫೌಂಡೇಷನ್‌ನಿಂದ ಮಾಡಲಾಗುತ್ತಿದೆ ಎಂದರು.
ಕಳೆದ ಎರಡು ವರ್ಷಗಳಿಂದ ನಾನು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್ ಜ್ಞಾನದ ಕೊರತೆ ಇರುವುದನ್ನು ಗಮನಿಸಿದ್ದೇನೆ. ಹಾಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಮುಂದಾಗಿದ್ದೇವೆ ಎಂದರು.ಪ್ರಾಯೋಗಿಕವಾಗಿ ಫ್ರಂಚ್ ರಾಕ್ಸ್ ಶತಮಾನೋತ್ಸವ ಸರ್ಕಾರಿ ಶಾಲೆ ಹಾಗೂ ತಾಲೂಕಿನ ಸೀತಾಪುರ ಸರ್ಕಾರಿ ಶಾಲೆಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮೇಲುಕೋಟೆ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಲಾಗುವುದು ಎಂದರು.
ಲರ್ನಿಂಗ್ ಮ್ಯಾಟರ್ಸ್ ಸಂಸ್ಥೆಯವರು ಖಾಸಗಿ ಸಾಪ್ಟವೇರ್ ವೃದ್ಧಿಸಿಕೊಂಡು ಶಾಲೆಗಳಲ್ಲಿ ಲ್ಯಾಬ್ ನಿರ್ಮಿಸಿಕೊಂಡು ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಹೆಚ್ಚಿಸುವ ಕೆಲಸ ಮಾಡಲಿದ್ದಾರೆ. ಸಂಸ್ಥೆಯುವರು ತಾರಾ ಇಂಗ್ಲಿಷ್ ಲ್ಯಾಬ್ ಮೂಲಕ ಸುಮಾರು 70 ಸಾವಿರಕ್ಕೂ ಅಧಿಕ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.ಈಗಾಗಲೆ ಖಾಸಗಿ ಸಂಸ್ಥೆಗಳ ಸಹಯೋಗದ ಮೂಲಕ ಕ್ಷೇತ್ರದಲ್ಲಿ ಹಲವಾರು ಕಾರ್‍ಯಕ್ರಮ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ. ಗ್ರಾಪಂಗಳಲ್ಲಿ ಅಧಿಕಾರಿಗಳು ಹೇಗೆ ವೈಜ್ಞಾನಿಕವಾಗಿ ಕೆಲಸ ಮಾಡಬೇಕು, ಪಟ್ಟಣದಲ್ಲಿ ಸಮರ್ಪಕ ಕಸ ವಿಲೇವಾರಿ ಮಾಡುವುದು, ಕೆರೆಗಳ ಒತ್ತವರಿ ತೆರವು, ಹೂಳು ತೆಗೆಸಿ ಕೆರೆ ಅಭಿವೃದ್ಧಿಪಡಿಸುವುದು, ಬೇಬಿಬೆಟ್ಟದ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು, ಪುರಸಭೆ ಹಾಗೂ ಮೇಲುಕೋಟೆ ಅಭಿವೃದ್ಧಿಗೆ ಟೌನ್‌ಪ್ಲಾನ್ ರಚನೆ ಮಾಡುವುದು, ರೈತರು ಸೋಲಾರ್ ಅಳವಡಿಕೆ, ಮಹಿಳೆಯರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡುವುದು ಸೇರಿದಂತೆ ಹಲವು ಕಾರ್‍ಯಕ್ರಮಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಹಣ ಸಂಪಾದನೆ ಮಾಡುವ ಸಂಸ್ಥೆಗಳು ಹೆಚ್ಚಾಗಿವೆ. ಇದರ ನಡುವೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಂದೆ ಪುಟ್ಟಣ್ಣಯ್ಯ ಹೆಸರಿನಲ್ಲಿ ಪೌಂಡೇಷನ್ ವತಿಯಿಂದ ಕ್ಷೇತ್ರದ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಹೆಚ್ಚುವುದಕ್ಕೆ ಮುಂದಾಗಿರುವುದು ಸ್ವಾಗರ್ತ ವಿಚಾರ ಎಂದರು.ಈ ವೇಳೆ ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ರವಿಕುಮಾರ್, ರೈತಸಂಘದ ಅಧ್ಯಕ್ಷ ವಿಜಯಕುಮಾರ್, ಮುಖ್ಯಶಿಕ್ಷಕ ಮಂಜುನಾಥ್, ಪುಟ್ಟಣ್ಣಯ್ಯ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಂಜಿತ್, ಲರ್ನಿಂಗ್ ಮ್ಯಾಟರ್ಸ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ಸಿಇಒ ರಾಮಮೂರ್ತಿ, ಗೌರಿಮಹೇಶ್, ವಕೀಲರಾದ ಸತೀಶ್, ಜಿ.ಬಿ.ಸುರೇಶ್, ಮುರುಳೀಧರ್ ಸೇರಿದಂತೆ ಹಲವರು ಇದ್ದರು.