ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ವಿದೇಶಿ ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಹೋಳಿ ಹಬ್ಬದಂದು ಸ್ಥಳೀಯರೊಂದಿಗೆ ವಿದೇಶಿಗರು ಸೇರಿಕೊಂಡು ಹೋಳಿ ಆಚರಿಸುವುದು ಹಂಪಿಯ ಮತ್ತೊಂದು ವಿಶೇಷ.
ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಮುಖ್ಯಗೋಪುರದ ಮುಂಭಾಗದಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಆತ್ಮೀಯತೆಯಿಂದ ಮತ್ತು ಸಲಿಗೆಯಿಂದ ಬೆರೆತು ಹಲಗೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಾ ಬಣ್ಣದಾಟದಲ್ಲಿ ತೊಡಗಿಕೊಂಡಿದ್ದರು.
ಈ ಬಾರಿ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಕಂಡು ಬಂದರು. ನವೆಂಬರ್‌ನಿಂದ ಮಾರ್ಚ್‌ವರೆಗೆ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿರುತ್ತಾರೆ. ಬಹುತೇಕ ಪ್ರವಾಸಿಗರು ಹಂಪಿಯಲ್ಲಿ ಹೋಳಿಯಾಡಲೆಂದೇ ಉಳಿದುಕೊಂಡು ಬಣ್ಣದಾಟ ಮುಗಿಸಿಕೊಡು ಹಂಪಿಯಿಂದ ನೇರವಾಗಿ ಗೋವಾ, ಗೋಕರ್ಣ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ.ಇನ್ನು ಕೆಲ ವಿದೇಶಿ ಪ್ರವಾಸಿಗರು ದೇಶದ ವಿವಿಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಂಪಿಗೆ ಬಂದು, ಹಂಪಿಯ ಸ್ಮಾರಕಗಳನ್ನು ನೋಡಿಕೊಂಡು, ಕೊನೆಯಲ್ಲಿ ಹೋಳಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ವಿದೇಶಿ ಪ್ರವಾಸಿಗರಲ್ಲಿ ಹೊಸದಾಗಿ ಹೋಳಿಯಲ್ಲಿ ಪಾಲ್ಗೊಂಡವರು ಆಚ್ಚರಿ, ಸಂತೋಷ, ಸಂಭ್ರಮವನ್ನು ವ್ಯಕ್ತಪಡಿಸಿದರು.
ಬುಧವಾರ ಬೆಳಿಗ್ಗೆ ರಂಗಿನಾಟದಲ್ಲಿ ಪುರುಷರು- ಮಹಿಳೆಯರು ಎಂಬ ಭೇದವಿಲ್ಲದೇ ಪಾಲ್ಗೊಂಡು ಸ್ಥಳೀಯರ ಜೊತೆ ಬಣ್ಣದಲ್ಲಿ ಮಿಂದು ಸಂಭ್ರಮಿಸಿದರು. ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚಾಡಿಕೊಂಡು ಮುಖಕ್ಕೆ ಹತ್ತಿದ ಬಣ್ಣ ನೋಡಿ ಖುಷಿಪಟ್ಟು ಬಣ್ಣದಲ್ಲಿ ಮಿಂದು ಹೋದರು. ಹಲಗೆ ವಾದನಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಹಾಕಿ ಮೈಮರೆತರು.
ವಿದೇಶಿ ಪ್ರವಾಸಿಗರು ಬಣ್ಣದಾಟದಲ್ಲಿ ತೊಡಗಿಕೊಂಡಿರುವ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ತೆಗೆದುಕೊಂಡು ತಮ್ಮೂರಿಗೆ ರವಾನಿಸುತ್ತಿದ್ದರು.
ಹಂಪಿಯಲ್ಲಿ ನಡೆಯುವ ಹೋಳಿಯಲ್ಲಿ ಭಾಗವಹಿಸಿರುವುದು ನಮಗೆ ಅತ್ಯಂತ ಸಂತೋಷವಾಗಿದೆ. ಹಂಪಿಯಲ್ಲಿರುವ ಸ್ಮಾರಕಗಳನ್ನು ನೋಡಿದಷ್ಟೇ ಹೋಳಿಯಲ್ಲಿ ಭಾಗವಹಿಸಿದ ಖುಷಿಯಾಗಿದೆ. ಹಂಪಿಯಲ್ಲಿ ಹೋಳಿ ಹಬ್ಬವನ್ನು ಸ್ಥಳೀಯರು ವಿದೇಶಿ ಪ್ರವಾಸಿಗರೊಂದಿಗೆ ಸೇರಿ ಆಚರಿಸುತ್ತಿರುವುದು ನಮಗೆ ಭಾರೀ ಸಂತೋಷ ನೀಡಿದೆ ಎನ್ನುತ್ತಾರೆ ವಿದೇಶಿ ಪ್ರವಾಸಿಗರಾದ ಆರ್ಯಾನ್, ಸೆಫೆನ್, ಯಾರಿಕ್, ಮರಿಯಾ.