ಕನ್ನಡಪ್ರಭ ವಾರ್ತೆ ಹಳಿಯಾಳ
ಬೆಳಗ್ಗೆಯಿಂದಲೇ ಯುವಕರು, ಮಕ್ಕಳು ಗುರುತು ಸಿಗದಂತೆ ಮುಖಕ್ಕೆ ಬಣ್ಣ ಮೆತ್ತಿಕೊಂಡು ಸಂಭ್ರಮಾಚರಣೆ ಆರಂಭಿಸಿದ್ದರೇ, ಕೆಲ ಯುವಕರು ಬೈಕ್ ಮೇಲೆ ಸವಾರಿ ಮಾಡುತ್ತಾ ಊರು ತುಂಬೆಲ್ಲಾ ಸುತ್ತಾಡಿ ಬಣ್ಣ ಎರಚಿ ಸಂಭ್ರಮಿಸಿದರು. ಮಕ್ಕಳು ಹಾಗೂ ಮಹಿಳೆಯರು ತಮ್ಮ ಓಣಿ, ವಠಾರಗಳು ಹಾಗೂ ಬಡಾವಣೆಗಳಲ್ಲಿ ಬಣ್ಣ ಹಚ್ಚಿ ಪರಸ್ಪರ ಶುಭಾಶಯ ಕೋರಿದರು.
ಬಣ್ಣ ಹಚ್ಚಿದ ದೇಶಪಾಂಡೆ:ಶಾಸಕ ಆರ್.ವಿ. ದೇಶಪಾಂಡೆ ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿ ವೃಂದ ಹಾಗೂ ಸಾರ್ವಜನಿಕರೊಂದಿಗೆ ಮತ್ತು ತಮ್ಮ ವಾರ್ಡಿನ ಮಹಿಳೆಯರೊಂದಿಗೆ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಇದೇ ಸಂದರ್ಭ ಮಾರುಕಟ್ಟೆ ಓಣಿಯ ಸಾರ್ವಜನಿಕ ರಥಿಮನ್ಮಥರ ಮೆರವಣಿಗೆಯಲ್ಲಿ ಪಾಲ್ಗೊಂಡು ರಥಿಮನ್ಮಥರ ಪಲ್ಲಕಿಯನ್ನು ಹೊತ್ತು ಕೊಂಡು ಪಟ್ಟಣವಾಸಿಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾದರು.
ತಾಲೂಕಿನಲ್ಲಿ ಸೋಮವಾರದಿಂದಲೇ ಹೋಳಿ ಆಚರಣೆ ಆರಂಭಗೊಂಡಿದ್ದು, ತೇರಗಾಂವ ಜಿಪಂ ವ್ಯಾಪ್ತಿಯ ಮಂಗಳವಾಡ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬಣ್ಣದಾಟ ನಡೆದರೇ, ಮಂಗಳವಾರ ಕಾವಲವಾಡ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬಣ್ಣದಾಟ ನಡೆಯಿತು, ಗುರುವಾರವೂ ತಾಲೂಕಿನ ಇತರೇ ಗ್ರಾಮಗಳಲ್ಲಿ ಹೋಳಿ ಆಚರಣೆ ನಡೆಯಲಿದೆ. ತಾಲೂಕಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಹೋಳಿ ಆಚರಣೆ ನಡೆದಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಹೋಳಿ ಆಚರಣೆಯ ಸಂದರ್ಭ ಹಳಿಯಾಳ ತಾಲೂಕಿನೆಲ್ಲೆಡೆ ಮರದ ದಿಮ್ಮಿಗಳನ್ನು ತಂದು ಪೂಜಿಸುವ ಸಂಪ್ರದಾಯ ನಡೆದು ಬಂದಿದೆ. ಹೀಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣಹೋಮ ನಡೆಯುವುದನ್ನು ಕಂಡು ಅವುಗಳನ್ನು ತಡೆಯಲು ಬಹು ಹಿಂದೆಯೇ ಅಂದಿನ ಡಿಸಿಎಫ್ ಸುಭಾಸ್ ಕೆ. ಮಾಳಖೇಡ ಜನಜಾಗೃತಿ ಸಭೆ ನಡೆಸಿ, ಮರಗಳನ್ನು ಕತ್ತರಿಸುವ ಬದಲು ಹಸಿ ಸಸಿಗಳನ್ನು ನೆಟ್ಟು ಹೋಳಿ ಆಚರಿಸುವ ಹೊಸ ಆಚರಣೆ ಆರಂಭಿಸಿದ್ದರು. ಅದಕ್ಕೆ ಸ್ಪಂದಿಸಿ ತಾಲೂಕಿನೆಲ್ಲೆಡೆ ಸಸಿಗಳನ್ನು ನೆಟ್ಟು ಹೋಳಿ ಆಚರಿಸುವ ವಿನೂತನ ಪದ್ಧತಿಯು ಕ್ರಮೇಣ ಆರಂಭಗೊಂಡಿತ್ತು. ಆದರೂ ಪ್ರತಿವರ್ಷ ಅರಣ್ಯ ಇಲಾಖೆಯು ಹೋಳಿ ಆಚರಣೆಯ ವಾರದ ಮುನ್ನಾ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಹೋಳಿ ಆಚರಣಾ ಸಮಿತಿಯವರ ತಪ್ಪದೇ ಸಭೆ ಕರೆದು ಜಾಗೃತಿ ಮೂಡಿಸಿ, ಸಸಿ ನೆಡಲು ಪ್ರೇರೆಪಿಸಲಾಗುತ್ತಿತ್ತು.