ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ವಿವಿಧ ವಿದೇಶಿ ವಿಶ್ವವಿದ್ಯಾಲಯಗಳು ತಲೆ ಎತ್ತಲಿವೆ. ಆದರೆ, ಈ ವಿವಿಗಳ ಮೇಲೆ ರಾಜ್ಯ ಸರ್ಕಾರದ ಯಾವುದೇ ನಿಯಂತ್ರಣ ಇರುವುದಿಲ್ಲ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮಾನದಂಡಗಳ ಆಧಾರದಲ್ಲಿ ಇವುಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.ಅಲ್ಲದೆ, ರಾಜ್ಯದಲ್ಲಿ ತಮ್ಮದೇ ಕ್ಯಾಂಪಸ್ ಸ್ಥಾಪಿಸಲು ಸಾಧ್ಯವಾಗದ ವಿದೇಶಿ ವಿವಿಗಳು ಮುಂದೆ ಬಂದರೆ ಅವರ ಪದವಿ ಕೋರ್ಸುಗಳ ಅಧ್ಯಯನಕ್ಕೆ ರಾಜ್ಯದ ಸಾರ್ವಜನಿಕ ಅಥವಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಒಡಂಬಡಿಕೆ ಮೂಲಕ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗುರುವಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ತಮ್ಮನ್ನು ಭೇಟಿ ಮಾಡಿದ ಯುನೈಟೆಡ್ ಕಿಂಗ್‌ಡಮ್‌ನ ಇಂಡೋ ಫೆಸಿಫಿಕ್ ಮಿನಿಸ್ಟರ್ ಸೀಮಾ ಮಲ್ಹೋತ್ರ ನೇತೃತ್ವದ ನಿಯೋಗ ಜೊತೆ ಈಗಾಗಲೇ ಆಗಿರುವ ವಿವಿಧ ಶೈಕ್ಷಣಿಕ ಒಪ್ಪಂದಗಳು ಹಾಗೂ ಅವುಗಳ ಮುಂದುವರಿಕೆ, ಇನ್ನಷ್ಟು ಹೊಸ ಒಡಂಬಡಿಕೆಗಳ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಇಂಗ್ಲೆಂಡಿನ ಲಿವರ್‌ಪೂಲ್ ವಿಶ್ವವಿದ್ಯಾಲಯ ಮುಂದಿನ ವರ್ಷದಿಂದ ದೇವನಹಳ್ಳಿ ಬಳಿಯ ಕ್ವಿನ್‌ಸಿಟಿಯಲ್ಲಿ ಪ್ರವೇಶ ಆರಂಭಿಸುವುದಾಗಿ ಈಗಾಗಲೇ ಘೋಷಿಸಿದೆ. ಇದರ ಮಾಹಿತಿಯನ್ನೂ ನಮಗೆ ನೀಡಿದೆ. ಅದೇ ರೀತಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ ಕೂಡ ಪ್ರವೇಶ ಆರಂಭಿಸುವ ಇಚ್ಛೆ ಹೊಂದಿದೆ. ಅಧಿಕೃತವಾಗಿ ಘೋಷಣೆ ಆಗಬೇಕಿದೆ ಎಂದರು.
ವಿದೇಶಿ ವಿವಿಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವೇನು ಎಂಬ ಪ್ರಶ್ನೆಗೆ, ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬಂದಿದ್ದ ಸಮಯದಲ್ಲಿ ನಮ್ಮ ಪ್ರಧಾನಿ ಮೋದಿ ಅವರು ಈಗಾಗಲೇ ದೇಶದ ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ವಿಶ್ವವಿದ್ಯಾಲಯಗಳು ಆರಂಭವಾಗುತ್ತಿವೆ ಎಂದು ಘೋಷಿಸಿದ್ದಾರೆ. ವಿದೇಶಿ ವಿವಿಗಳು ಸಂಪೂರ್ಣ ಯುಜಿಸಿ ಮಾನದಂಡಗಳ ಅಡಿಯಲ್ಲೇ ಆರಂಭವಾಗುತ್ತವೆ. ಸ್ಥಳೀಯ ಅಥವಾ ರಾಜ್ಯ ಸರ್ಕಾರಕ್ಕೆ ಈ ವಿವಿಗಳ ನಿಯಂತ್ರಣ ಹೇರಲಾಗಲ್ಲ. ಅವುಗಳಿಗೆ ಅಗತ್ಯ ಸಹಕಾರ ನೀಡುವುದು, ಅವಕಾಶ ಮಾಡಿಕೊಡುವುದು ಮಾತ್ರ ನಮ್ಮ ಕೆಲಸ ಎಂದರು.ಯುಜಿಸಿಗೆ ಸ್ಪಷ್ಟನೆ ಕೇಳುತ್ತೇವೆ:
ಹಾಗಾದರೆ, ವಿದೇಶಿ ವಿವಿಗಳಿಂದ ರಾಜ್ಯದ ಮಕ್ಕಳಿಗೆ ಏನಾದರೂ ಸಮಸ್ಯೆ ಆದರೆ ಯಾರು ಹೊಣೆ ಎಂಬ ಪ್ರಶ್ನೆಗೆ, ಸದ್ಯಕ್ಕೆ ವಿದೇಶಿ ವಿವಿಗಳ ಪ್ರಸ್ತಾವನೆ ಒಪ್ಪಿ ಯುಜಿಸಿ ನಿಯಮಾವಳಿ ಪ್ರಕಾರ ವಿವಿಗಳ ಆರಂಭಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ಯಾವುದಾರೂ ವಿವಿ ಏಕಾಏಕಿ ಮುಚ್ಚಿಹೋಗುವುದು ಸೇರಿ ಇನ್ಯಾವುದೇ ಸಮಸ್ಯೆಗಳು ಆದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಯುಜಿಸಿಗೆ ಪತ್ರ ಬರೆದು ಸ್ಪಷ್ಟನೆ ಪಡೆಯಲಾಗುವುದು ಎಂದರು.-ಬಾಕ್ಸ್-
ವಿದೇಶಿ ವಿವಿಗಳ ಸಹಯೋಗದಲ್ಲಿಡ್ಯುವೆಲ್ ಡಿಗ್ರಿ ಕಾರ್ಯಕ್ರಮ: ಸಚಿವ
ರಾಜ್ಯದಲ್ಲಿ ತಮ್ಮ ವಿವಿಯ ಕ್ಯಾಂಪಸ್ ಅಥವಾ ಶಾಖೆ ಆರಂಭಿಸಲು ಸಾಧ್ಯವಾಗದ ವಿದೇಶಿ ವಿಶ್ವವಿದ್ಯಾಲಯಗಳು ಕೂಡ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಸಹಯೋಗ, ಒಪ್ಪಂದದ ಮೂಲಕ ತಮ್ಮಲ್ಲಿರುವ ಪದವಿ ಕೋರ್ಸುಗಳನ್ನು ಇಲ್ಲಿ ಆರಂಭಿಸಬಹುದು. ಈ ನಿಟ್ಟಿನಲ್ಲಿ ಇಂದಿನ ಇಂಗ್ಲೆಂಡ್ ಸರ್ಕಾರದ ನಿಯೋಗದ ಮುಂದೆ ಡ್ಯುವೆಲ್ ಡಿಗ್ರಿ ಕಾರ್ಯಕ್ರಮದ ಪ್ರಸ್ತಾವನೆ ಇಡಲಾಗಿದೆ ಎಂದು ಇದೇ ವೇಳೆ ಸಚಿವ ಸುಧಾಕರ್ ತಿಳಿಸಿದರು. ಈ ರೀತಿ ಡ್ಯುವಲ್ ಡಿಗ್ರಿ ಕಾರ್ಯಕ್ರಮದಡಿ ವ್ಯಾಸಂಗ ಮಾಡಿದವರಿಗೆ ನಮ್ಮ ವಿವಿಯಲ್ಲಿನ ಪದವಿ ಪ್ರಮಾಣ ಪತ್ರ ಮತ್ತು ವಿದೇಶಿ ವಿವಿಯ ಕೋರ್ಸು ಓದಿದ ಪ್ರಮಾಣಪತ್ರ ಎರಡೂ ಸಿಗುತ್ತವೆ. ಅವರಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದರು.ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೈಗಾರಿಕೆಗಳ ಸ್ಥಿತಿ ಏನಾಗುತ್ತಿದೆ ನೋಡಿದ್ದೇವೆ. ರಾಜ್ಯಗಳ ಮಧ್ಯೆ ಸ್ಪರ್ಧೆ ಹೆಚ್ಚಾಗುತ್ತಿದೆ. ಭೂಮಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿ ರಾಜ್ಯಗಳು ಸ್ಪರ್ಧೆಗಿಳಿದಿವೆ. ಅದೇ ರೀತಿ ವಿದೇಶಿ ವಿವಿಗಳ ವ್ಯವಸ್ಥೆ ಕೂಡ. ನಾವು ಬೇಡ ಅಂದರೆ ಇನ್ನೊಂದು ರಾಜ್ಯಕ್ಕೆ ಹೋಗಬಹುದು ಅಥವಾ ವಾಪಸ್ ಹೋಗುತ್ತವೆ. ಅದರ ಬದಲು ಅವಕಾಶ ನೀಡುವುದರಿಂದ ನಮ್ಮ ಮಕ್ಕಳು ಲಕ್ಷಾಂತರ ರು. ಕೊಟ್ಟು ಸಾಲ, ಸೋಲ, ಮಾಡಿ ತಂದೆ-ತಾಯಿ ಬಿಟ್ಟು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವ ಬದಲು ಅದೇ ಶಿಕ್ಷಣವನ್ನು ಇಲ್ಲೇ ಪಡೆಯಲು ಅವಕಾಶವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ನಿರಂಜನ್, ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.