ಕನ್ನಡಪ್ರಭ ವಾರ್ತೆ ಬೆಂಗಳೂರು
ವರ್ತೂರು ಸಮೀಪದ ನಿವಾಸಿ ಓಲಾಜೈಡ್ ಎಸ್ತರ್ ಬಂಧಿತೆ. ಮುಂಬೈನಿಂದ ಬಸ್ಸಿನಲ್ಲಿ ಪಯಣಿಸಿದ್ದ ಆಕೆ, ಬ್ರೇಡ್‌ನ ಕೊಕೇನ್ ಅಡಗಿಸಿಟ್ಟುಕೊಂಡು ನಗರಕ್ಕೆ ಬಂದಿದ್ದಳು. ಎಸ್ತರ್ ಮೂಲತಃ ನೈಜೀರಿಯಾ ದೇಶದವಳಾಗಿದ್ದು, ಕಳೆದ ವರ್ಷ ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಆಕೆ ಬಂದಿದ್ದಳು. ನಂತರ ದೆಹಲಿಯ ಯೂನಿವರ್ಸಿಯೊಂದರಲ್ಲಿ ಪದವಿ ಓದಲು ಬಂದಿದ್ದ ಆಕೆ, ಯಾವುದೇ ಕಾಲೇಜಿಗೆ ದಾಖಲಾಗೆ ಡ್ರಗ್ಸ್ ದಂಧೆಗಿಳಿದಿದ್ದಳು. ದೆಹಲಿಯಿಂದ ಮುಂಬೈಗೆ ಶಿಫ್ಟ್ ಆದ ಎಸ್ತರ್, ಅಲ್ಲಿನ ನಲ್ಲಾಸೋಪ್ರಾ ಪ್ರದೇಶದಲ್ಲಿ ನೆಲೆ ನಿಂತಿದ್ದಳು. ಆಗ ತನ್ನ ಸ್ನೇಹಿತ ಸೂಚಿಸಿದ ಸ್ಥಳಗಳಿಗೆ ತೆರಳಿ ಗ್ರಾಹಕರಿಗೆ ಕೊಕೇನ್ ಪೂರೈಸುವ ಕೆಲಸ ಮಾಡುತ್ತಿದ್ದಳು. ಇದರಿಂದ ಆಕೆಗೆ ಕೈ ತುಂಬಾ ಹಣ ಸಿಗುತ್ತಿತ್ತು. ಅಂತೆಯೇ ಮುಂಬೈನಿಂದ ಬೆಂಗಳೂರಿಗೆ ಎಸ್ತರ್ ಡ್ರಗ್ಸ್ ಸಾಗಿಸಲು ಯತ್ನಿಸಿದ್ದಳು. ಕೆಲ ದಿನಗಳ ಹಿಂದೆ ವರ್ತೂರು ಸಮೀಪ ಬಾಡಿಗೆ ಮನೆ ಪಡೆದು ಎಸ್ತರ್ ನೆಲೆಸಿದ್ದಳು ಎಂದು ಸಿಸಿಬಿ ಮಾಹಿತಿ ನೀಡಿದೆ.
ಈ ಡ್ರಗ್ಸ್ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಎ.ಕೆ.ರಕ್ಷಿತ್ ತಂಡವು ಕಾರ್ಯಾಚರಣೆಗಿಳಿಯಿತು. ಅಂತೆಯೇ ಮುಂಬೈನಿಂದ ಎಸ್ತರ್ ಪಯಣಿಸುತ್ತಿದ್ದ ಬಸ್‌ನ ಮಾಹಿತಿ ಪಡೆದು ನೆಲಮಂಗಲ ಟೋಲ್ ಗೇಟ್‌ನಿಂದ ಸಿಸಿಬಿ ತಂಡ ಬೆನ್ನತ್ತಿದೆ. ಕೊನೆಗೆ ವರ್ತೂರು ಮನೆಗೆ ಆಕೆ ತಲುಪುತ್ತಿದ್ದಂತೆ ಬಂಧಿಸಿದಾಗ 121 ಗ್ರಾಂ ಕೊಕೇನ್ ಪತ್ತೆಯಾಗಿದೆ. ಈ ಕೊಕೇನ್ ಒಳ್ಳೆಯ ದರ್ಜೆಯದ್ದು ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಿಆರ್‌ಐ ಸಹ ಬೇಟೆ:ಡ್ರಗ್ಸ್ ಸಾಗಾಣಿಕೆ ಬಗ್ಗೆ ಬಾತ್ಮಿ ಪಡೆದು ಎಸ್ತರ್ ಬಂಧನಕ್ಕೆ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಸಹ ಯತ್ನಿಸಿತ್ತು. ನೆಲಮಂಗಲದಿಂದ ಆಕೆಯನ್ನು ಸಿಸಿಬಿ ಜತೆ ಡಿಆರ್‌ಐ ಅಧಿಕಾರಿಗಳು ಹಿಂಬಾಲಿಸಿದ್ದರು. ಆದರೆ ಡಿಆರ್‌ಐ ಮುನ್ನವೇ ಎಸ್ತರ್ ಸಿಸಿಬಿ ಬಲೆಗೆ ಬಿದ್ದಿದ್ದಾಳೆ ಎಂದು ಮೂಲಗಳು ಹೇಳಿವೆ.
ನಿರೀಕ್ಷಿಸಿದ್ದು ಕೆಜಿ ಸಿಕ್ಕಿದ್ದು ಗ್ರಾಂ:ಎಸ್ತರ್ ಬಳಿ ಭಾರಿ ಪ್ರಮಾಣದ ಡ್ರಗ್ಸ್ ಸಿಗಬಹುದು ಎಂದು ಅಂದಾಜಿಸಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿಗೆ ತುಸು ನಿರಾಸೆಯಾಗಿದೆ. ಆಕೆಯ ಬಳಿ ಕೇವಲ 121 ಗ್ರಾಂ ಕೊಕೇನ್ ಮಾತ್ರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಮತ್ತಿಬ್ಬರು ಜಾಲಹಳ್ಳಿ ಪೊಲೀಸರಿಗೆ ಸೆರೆಜಾಲಹಳ್ಳಿ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಪೆಡ್ಲರ್‌ಗಳು ಬಂಧಿತರಾಗಿದ್ದಾರೆ. ಕೇರಳ ರಾಜ್ಯದ ಕೆ.ನಿಜಿಲ್ ರಾಜ್ ಹಾಗೂ ಮೇಲ್ವೀನ್ ಮೋನ್ಸಿ ಬಂಧಿತರಾಗಿದ್ದು, ಆರೋಪಿಗಳಿಂದ 247 ಗ್ರಾಂ ಹೈಡ್ರೋ ಗಾಂಜಾ ಹಾಗೂ 19 ಗ್ರಾಂ ಎಂಡಿಎಂಎ ಸೇರಿದಂತೆ 26.90 ಲಕ್ಷ ರು ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಜಾಲಹಳ್ಳಿಯ ಕಾಳಿಂಗ ರಾವ್ ಸರ್ಕಲ್ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೆಲ್ವೀನ್ ಪದವಿಧರನಾಗಿದ್ದರೆ, ನಿಜಿಲ್ ರಾಜ್ 10ನೇ ತರಗತಿವರಗೆ ಓದಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈ ಇಬ್ಬರು ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾರಾಟಕ್ಕಿಳಿದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಸಾರಥ್ಯದಲ್ಲಿ ಇನ್ಸ್‌ಪೆಕ್ಟರ್ ಶಿವಕುಮಾರ್ ತಂಡ ಕಾರ್ಯಾಚರಣೆ ನಡೆಸಿದೆ.