ರಸ್ತೆ ಅಗಲೀಕರಣಕ್ಕೆ ಮರ ಹನನ ಕೈಬಿಟ್ಟ ಅರಣ್ಯ ಇಲಾಖೆ: ಕೇಸು ಕೈಬಿಟ್ಟ ಎನ್‌ಜಿಟಿ

KannadaprabhaNewsNetwork | Published : Mar 22, 2024 1:07 AM

ಸಾರಾಂಶ

ನಂದಿಗುಡ್ಡೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ 34 ಹೆರಿಟೇಜ್‌ ಮರಗಳನ್ನು ಅನಗತ್ಯವಾಗಿ ಕಡಿಯಲು ಹೊರಟ ಮಂಗಳೂರಿನ ಸ್ಮಾರ್ಟ್‌ಸಿಟಿ ಹಾಗೂ ಇತರರ ವಿರುದ್ದ ಎನ್‌ಇಸಿಎಫ್‌ ಮಂಗಳೂರು ಸಮಿತಿ ವತಿಯಿಂದ ವತಿಯಿಂದ ಚೆನ್ನೈ ಎನ್‌ಜಿಟಿಯಲ್ಲಿ ದಾವೆ ಹೂಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದ ನಂದಿಗುಡ್ಡ-ಮಾರ್ನಮಿಕಟ್ಟೆ ವರೆಗೆ ರಸ್ತೆ ಅಗಲೀಕರಣಕ್ಕೆ 34 ಹೆರಿಟೇಜ್‌ ಮರಗಳನ್ನು ಕಡಿಯುವ ಸ್ಮಾರ್ಟ್‌ಸಿಟಿ ಪ್ರಸ್ತಾಪಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠ ಈ ದಾವೆಯನ್ನು ವಜಾಗೊಳಿಸಿದೆ ಎಂದು ರಾಷ್ಟ್ರೀಯ ಪರಿಸರ ಒಕ್ಕೂಟ(ಎನ್‌ಇಸಿಎಫ್‌) ಹೇಳಿದೆ.

ಒಕ್ಕೂಟ ಸಂಚಾಲಕ ಶಶಿಧರ್‌ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ನಂದಿಗುಡ್ಡೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ 34 ಹೆರಿಟೇಜ್‌ ಮರಗಳನ್ನು ಅನಗತ್ಯವಾಗಿ ಕಡಿಯಲು ಹೊರಟ ಮಂಗಳೂರಿನ ಸ್ಮಾರ್ಟ್‌ಸಿಟಿ ಹಾಗೂ ಇತರರ ವಿರುದ್ದ ಎನ್‌ಇಸಿಎಫ್‌ ಮಂಗಳೂರು ಸಮಿತಿ ವತಿಯಿಂದ ವತಿಯಿಂದ ಚೆನ್ನೈ ಎನ್‌ಜಿಟಿಯಲ್ಲಿ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ನಮ್ಮ ಆಗ್ರಹವನ್ನು ಪರಿಗಣಿಸಿ 34 ಮರಗಳನ್ನು ಕಡಿಯದಂತೆ ಆದೇಶಿಸಿದೆ. ಇದಕ್ಕೆ ಅರಣ್ಯಾಧಿಕಾರಿಗಳು ಸಮ್ಮತಿಸಿದ್ದಾರೆ ಎಂದರು.ಮರಗಳನ್ನು ಕಡಿಯದೆ ಪರ್ಯಾಯವಾಗಿ ರಸ್ತೆ ಅಭಿವೃದ್ದಿ ಮಾಡಲು ಅವಕಾಶ ಇದ್ದರೂ ಇದೆಲ್ಲದರ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಪರಿಸರ ಪ್ರಿಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕಾಯಿತು. ಈ ಕಾರಣದಿಂದ ಇಂದು ಮರಗಳು ಉಳಿದಿದೆ. ಮರ ಕಡಿಯಲು ಆಸಕ್ತಿ ತೋರಿದವರ ವಿರುದ್ದವೂ ಮುಂದೆ ಕಾನೂನು ಹೋರಾಟ ನಡೆಸಲಾಗುವುದು ಎಂದರು.ಇದೇ ಸ್ವರೂಪದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ತರಾತುರಿಯಲ್ಲಿ ಜಲಾಭಿಮುಖ ಯೋಜನೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಕಾಂಡ್ಲಾವನ, ಪರಿಸರದ ಬಗ್ಗೆ ಒಂದಿನಿತೂ ಕಾಳಜಿ ವಹಿಸದೆ, ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ನೇತ್ರಾವತಿ, ಫಲ್ಗುಣಿ ನದಿ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದು ನದಿ ಒತ್ತುವರಿ ಅಲ್ಲಲ್ಲಿ ನಡೆಯುತ್ತಿದೆ. ಇದರ ವಿರುದ್ದವೂ ಕಾನೂನು ಹೋರಾಟ ಮುಂಬರುವ ದಿನದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.ಎನ್‌ಇಸಿಎಫ್‌ ಪದಾಧಿಕಾರಿಗಳಾದ ಅನಿತಾ ಭಂಡಾರ್ಕರ್‌, ನಾರಾಯಣ ಬಂಗೇರ, ಜಾನ್‌ ಡಿಸೋಜಾ, ಹರೀಶ್‌ ರಾಜ್‌ಕುಮಾರ್‌, ಬೆನೆಡಿಕ್ಟ್ ಫರ್ನಾಂಡಿಸ್‌, ಆರತಿ ಅಶೋಕ್‌ ಇದ್ದರು.

Share this article