ಹೂವಿನಹಡಗಲಿ: ನದಿ, ಕೆರೆ, ಕಟ್ಟೆಗಳೆಲ್ಲ ಮಳೆ ಇಲ್ಲದೇ ಬರಿದಾಗಿ ಹೋಗಿವೆ. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ನೀರಿನ ಚೆಕ್ ಡ್ಯಾಂಗಳಲ್ಲಿಯೂ ಹನಿ ನೀರಿಲ್ಲ. ಇದರಿಂದ ಕಾಡು ಪ್ರಾಣಿಗಳು ನೀರು ಅರಸಿ ನಾಡಿನ ಕಡೆಗೆ ಬಾರದಂತೆ ಅನೇಕ ಕಡೆಗಳಲ್ಲಿ ಅರಣ್ಯ ಇಲಾಖೆ ತಾತ್ಕಾಲಿಕ ನೀರಿನ ತೊಟ್ಟಿ ನಿರ್ಮಾಣ ಮಾಡಿ ಟ್ಯಾಂಕರ್ ಮೂಲಕ ನೀರು ಹಾಕಿ ದಾಹ ಇಂಗಿಸಿದ್ದಾರೆ.
ತಾಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ದೊಡ್ಡ ಕೆರೆಗಳಿವೆ. ತುಂಬಿನಕೆರೆ, ಸೋಗಿ, ಕೊಯಿಲಾರಗಟ್ಟಿ, ಹ್ಯಾರಡ ಸೇರಿದಂತೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದ್ದ ಕೆರೆಗಳು ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ 15-20ಕ್ಕೂ ಹೆಚ್ಚು ಸಿಮೆಂಟ್‌ನ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಟ್ಯಾಕ್ಟರ್ ಟ್ಯಾಂಕರ್ ಮೂಲಕ ನೀರು ಸಂಗ್ರಹಿಸಿದ್ದಾರೆ.ತಾಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕರಡಿ, ಚಿರತೆ, ತೊಳ, ನರಿ, ಮೊಲ ಸೇರಿದಂತೆ ನೂರಾರು ಬಗೆಯ ಪಕ್ಷಿಗಳು ನೀರಿನ ತೊಟ್ಟಿಯಲ್ಲಿ ಬೀಳದಂತೆ ಸರಾಗವಾಗಿ ನೀರು ಕುಡಿಯುವ ವ್ಯವಸ್ಥೆಯನ್ನು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಮಾಡಿದೆ.
ಪ್ರತಿ ಬೇಸಿಗೆಯ ಸಂದರ್ಭದಲ್ಲಿ ಕಾಡು ಪ್ರಾಣಿಗಳು ನೀರು ಮತ್ತು ಆಹಾರ ಅರಸಿ, ನಾಡಿನ ಕಡೆಗೆ ಬಂದು ಹಸು, ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತಿದ್ದವು, ಇದನ್ನು ತಡೆಗಟ್ಟಬೇಕೆಂಬ ಉದ್ದೇಶದಿಂದ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಸದ್ಯ ಚಿರತೆ ಸೇರಿದಂತೆ ಇತರೆ ಕಾಡು ಪ್ರಾಣಿಗಳ ದಾಳಿಯ ಹಾವಳಿ ಕಡಿಮೆಯಾಗಿದೆ.ತಾಲೂಕಿನ ವ್ಯಾಪ್ತಿಯಲ್ಲಿನ ಕೊಯಿಲಾರಗಟ್ಟಿ, ಸೋಗಿ, ತುಂಬಿನಕೆರೆ, ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ನೀರು ಅರಸಿ ನಾಡಿನ ಕಡೆಗೆ ಬರದಂತೆ ತಾತ್ಕಾಲಿಕವಾಗಿ ಸಿಮೆಂಟ್ ರಿಂಗ್‌ನಲ್ಲಿ ಟ್ಯಾಂಕರ್ ಮೂಲಕ ನೀರು ತಂದು ಸಂಗ್ರಹಿಸಿದ್ದೇವೆ. ಈ ಮೂಲಕ ಕಾಡು ಪ್ರಾಣಿಗಳ ನೀರಿನ ದಾಹ ನೀಗಿಸುವ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರೇಣುಕಾ.