ದೈತ್ಯಾಕಾರದ ಕಾಡಾನೆ ವಿಕ್ರಾಂತ್‌ ಸೆರೆ

KannadaprabhaNewsNetwork |  
Published : Mar 21, 2025, 12:30 AM IST
20ಎಚ್ಎಸ್ಎನ್5 : ಸೆರೆಸಿಕ್ಕ ವಿಕ್ರಾಂತ್‌ ಆನೆಯನ್ನು ಲಾರಿ ಮೇಲೆ ಬೇರೆಡೆಗೆ ಸಾಗಿಸುತ್ತಿರುವುದು. | Kannada Prabha

ಸಾರಾಂಶ

ಮೂರು ದಿನಗಳ ಕಾಲ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ಜನರ ತಂಡ ಭಾಗಿಯಾಗಿತ್ತು. ಹಾಸನ ಡಿಎಫ್‌ಓ ಸೌರಭ್ ಕುಮಾ‌ರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಹರಸಾಹಸ । ಅರಣ್ಯ ಇಲಾಖೆ ಸಿಬ್ಬಂದಿ ಜೊತೆ 7 ಸಾಕಾನೆಗಳಿಂದ ಕಾರ್ಯಾಚರಣೆ ಯಶಸ್ವಿ

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ವಾಟೀಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಅಲೆದಾಡುತ್ತಿದ್ದ ದೈತ್ಯ ಆಕಾರದ ವಿಕ್ರಾಂತ್ ಕಾಡಾನೆ ಕೊನೆಗೂ ಗುರುವಾರ ಸೆರೆ ಸಿಕ್ಕಿದೆ.

ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಲು ಶತಾಯಗತಾಯ ಪ್ರಯತ್ನಿಸಿದ ಅರಣ್ಯ ಇಲಾಖೆ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್‌ (ಇಟಿಎಫ್) ಸಿಬ್ಬಂದಿ, ಇಂದು ಬೆಳಗ್ಗೆ ಏಳು ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆಯನ್ನು ಮುನ್ನಡೆಸಿದರು. ದಟ್ಟ ಅರಣ್ಯ ಪ್ರದೇಶದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾಡಾನೆ ವಿಕ್ರಾಂತ್ ನನ್ನು ಸೆರೆಹಿಡಿಯಲು ಹರಸಾಹಸಪಟ್ಟರು. ಆದರೆ ಮತ್ತೊಂದು ಕಾಡಾನೆ ಭೀಮನ ಪ್ರವೇಶದಿಂದ ಕಾರ್ಯಾಚರಣೆಗೆ ತೊಡಕಾಗಿತ್ತು. ನಂತರ ಭೀಮನಿಗೂ ಅರವಳಿಕೆ ಚುಚ್ಚುಮದ್ದು ನೀಡಿ ಇಬ್ಬರ ಜೋಡಿಯನ್ನು ಬೇರ್ಪಡಿಸಿದ್ದರು.

ಕೊನೆಗೆ ಸಾಕಾನೆಗಳ ಸಹಾಯದೊಂದಿಗೆ ಅರವಳಿಕೆ ಚುಚ್ಚುಮದ್ದು (ಟ್ರಾಂಕ್ವಿಲೈಜರ್) ನೀಡುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿ, ಕಾಡಾನೆ ವಿಕ್ರಾಂತ್ ನನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ, ಈ ಕಾರ್ಯಾಚರಣೆಗಾಗಿ ವೈದ್ಯರ ತಂಡವೂ ಸ್ಥಳದಲ್ಲಿತ್ತು. ಪ್ರಶಾಂತ, ಕರ್ನಾಟಕ ಭೀಮ, ಧನಂಜಯ, ಕಂಜನ್, ಹರ್ಷ, ಏಕಲವ್ಯ ಮತ್ತು ಮಹೇಂದ್ರ ಎಂಬ ಸಾಕಾನೆಗಳು ಭಾಗವಹಿಸಿದ್ದವು.

ಮೂರು ದಿನಗಳ ಕಾಲ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ಜನರ ತಂಡ ಭಾಗಿಯಾಗಿತ್ತು. ಹಾಸನ ಡಿಎಫ್‌ಓ ಸೌರಭ್ ಕುಮಾ‌ರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ವಿಕ್ರಾಂತ್‌ನನ್ನು ಸಂಪೂರ್ಣವಾಗಿ ನಿಯಂತ್ರಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯ ಮುಂದುವರಿದಿದೆ. ಕಳೆದ ಒಂದು ತಿಂಗಳಿನಿಂದ ಅರೆಹಳ್ಳಿ ಮಲೆನಾಡು ಭಾಗದ ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಮುತ್ತಿಗೆ ಹಾಕಿ ಕಾಫಿ, ಮೆಣಸು, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡುವುದರ ಜೊತೆಗೆ ಮೂವರನ್ನು ಬಲಿ ಪಡೆದಿತ್ತು. ಈ ಬಗ್ಗೆ ಬೆಳಗಾರರ ಸಂಘಟನೆಗಳು ಹಾಗೂ ಶಾಸಕರು ಉಗ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆನೆ ಹಿಡಿಯುವ ಕಾರ್ಯಾಚರಣೆಗೆ ಸರ್ಕಾರದ ಆದೇಶದೊಂದಿಗೆ ಅರಣ್ಯ ಇಲಾಖೆ ಮುಂದಾಗಿತ್ತು. ಈಗ ಕಾಡಾನೆ ವಿಕ್ರಾಂತ್ ನನ್ನು ಅಧಿಕಾರಿಗಳು ಸೆರೆ ಹಿಡಿದಿದ್ದು ಉಳಿದ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ವಿಕ್ರಾಂತನ ಸೆರೆಯಿಂದ ಸುತ್ತಲಿನ ಗ್ರಾಮಸ್ಥರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

-----------------------------------------------------

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌