ಕನಕಗಿರಿ:
ಐತಿಹಾಸಿಕ ಪ್ರಸಿದ್ಧ ಶ್ರೀಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ಅಂಗವಾಗಿ ಗುರುವಾರ ಬೆಳಗಿನ ಜಾವ ಗರುಡೋತ್ಸವವು ಗೋವಿಂದ ನಾಮಸ್ಮರಣೆಯೊಂದಿಗೆ ವೈಭವದಿಂದ ನೆರವೇರಿತು.ಬೆಳಗಿನ ಜಾವ ೪.೫೦ಕ್ಕೆ ಆರಂಭವಾದ ಗರುಡೋತ್ಸವವು ರಾಜಬೀದಿಯ ಮೂಲಕ ಎದುರು ಹನುಮಪ್ಪನ ದೇವಸ್ಥಾನ ತಲುಪಿ ಸ್ವಸ್ಥಾನಕ್ಕೆ ಮರಳಿತು.
ಬಂಗಾರ ವರ್ಣದ ಗರುಡ ವಾಹನ ಮೂರ್ತಿಯ ಮೇಲೆ ಸಂಪ್ರದಾಯದಂತೆ ಹತ್ತಾರು ಕಾರ್ಮಿಕರಿಂದ ಸಿದ್ಧಗೊಂಡ ಬೃಹತ್ ನೀಲಿ ಪಟ ಹೊಂದಿದ ಉಚ್ಛಾಯದಲ್ಲಿ ಲಕ್ಷ್ಮೀನರಸಿಂಹನು ಶ್ರೀದೇವಿ ಭೂದೇವಿಯರೊಂದಿಗೆ ಸಾಗಿದನು. ಭಕ್ತರು ದಿವಟಗಿ ಹಿಡಿದು ಕೊಬ್ಬರಿ, ಕರ್ಪೂರ ಸುಟ್ಟು ಪಂಜಿನ ಬೆಳಕಿನಡಿ ರಾಜಬೀದಿಯಲ್ಲಿ ಸಂಭ್ರಮದಿಂದ ಮೆರವಣಿಗೆ ನಡೆಸಿದರು. ಶ್ರೀರಾಮನಗರದ ಕೋಲಾಟ ತಂಡದಿಂದ ಕೋಲಾಟ ಗಮನ ಸೆಳೆಯಿತು.ಭಕ್ತರು ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಗರುಡೋತ್ಸವದ ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಗಳಿಂದ ಆಗಸದಲ್ಲಿ ಮೂಡಿದ ಬಣ್ಣ-ಬಣ್ಣದ ಚಿತ್ತಾರಗಳು ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದವು.
ಗರುಡೋತ್ಸವ ಮೆರವಣಿಗೆ ಸೂರ್ಯೋದಯದ ಮುನ್ನವೇ ಮೂಲಸ್ಥಾನಕ್ಕೆ ತಲುಪಿತು. ಗೊಲ್ಲ ಜನಾಂಗದವರು ಹಳದಿ ವಸ್ತ್ರಧಾರಿಗಳಾಗಿ ಗಮನ ಸೆಳೆದರು. ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಯ್ಕ, ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಧೀಶ ನಾಗೇಶ ಪಾಟೀಲ್, ಮಾಜಿ ಶಾಸಕರಾದ ಬಸವರಾಜ ದಢೇಸುಗೂರು, ಪ್ರತಾಪಗೌಡ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಭಾಗವಹಿಸಿದ್ದರು.ಇದಕ್ಕೂ ಮುನ್ನ ಗುರುವಾರ ಬೆಳಗಿನ ಜಾವ ೨ ಗಂಟೆಯಿಂದ ನಡೆದ ಕಲ್ಯಾಣೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕುಟುಂಬ, ತಹಸೀಲ್ದಾರ್ ವಿಶ್ವನಾಥ ಮುರುಡಿ ಕುಟುಂಬಗಳು ಶ್ರೀಕನಕಾಚಲಪತಿಗೆ ಶ್ರೀದೇವಿ, ಭೂದೇವಿಯರನ್ನು ಕನ್ಯಾದಾನ ಮಾಡಿದರೆ, ಅರ್ಚಕರ ಕುಟುಂಬವು ಕನಕಾಚಲಪತಿ (ಗಂಡಿನ) ಪೌರೋಹಿತ್ಯ ವಹಿಸಿಕೊಂಡು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೆಸಿದರು. ಗರುಡೋತ್ಸವದ ಬಳಿಕ ನೆರೆದಿದ್ದ ಭಕ್ತರಿಗೆ ದಾನಿಗಳು ಉಪಾಹಾರ ನೀಡಿದರು.