ಅರಣ್ಯ ಇಲಾಖೆಯಿಂದ ರೈತರ ಬದುಕುವ ಹಕ್ಕು ಕಸಿಯುವ ಪ್ರಯತ್ನ: ಕಿಶೋರ್ ಶಿರಾಡಿ

KannadaprabhaNewsNetwork | Published : Jan 22, 2025 12:33 AM

ಸಾರಾಂಶ

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗುವ ಮೂಲಕ ಅರಣ್ಯ ಇಲಾಖೆಯು ರೈತರ ಬದುಕುವ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಕೊರೋನಾ ಕಾಲಘಟ್ಟದಲ್ಲೂ ಕಂಗೆಡದ ರೈತ ಈಗ ಅರಣ್ಯಾಧಿಕಾರಿಗಳು ನೀಡುವ ಉಪಟಳದಿಂದ ತಮ್ಮ ಸ್ವಾವಲಂಬಿ ಬದುಕನ್ನು ಕಳೆದುಕೊಂಡು ಧೃತಿಗೆಡುವಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಕೈಬಿಡಬೇಕು. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕು ಎಂದು ಆಗ್ರಹಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಜ. 21ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಗೇಟ್ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗುವ ಮೂಲಕ ಅರಣ್ಯ ಇಲಾಖೆಯು ರೈತರ ಬದುಕುವ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಕೊರೋನಾ ಕಾಲಘಟ್ಟದಲ್ಲೂ ಕಂಗೆಡದ ರೈತ ಈಗ ಅರಣ್ಯಾಧಿಕಾರಿಗಳು ನೀಡುವ ಉಪಟಳದಿಂದ ತಮ್ಮ ಸ್ವಾವಲಂಬಿ ಬದುಕನ್ನು ಕಳೆದುಕೊಂಡು ಧೃತಿಗೆಡುವಂತಾಗಿದೆ ಎಂದರು.ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರ ಸೈಯ್ಯದ್ ಮೀರಾ ಸಾಹೇಬ್ ಕಡಬ ಮಾತನಾಡಿ, ಆನೆ ದಾಳಿ ಇತರೆ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗದಂತೆ ಅರಣ್ಯ ಇಲಾಖೆ ನಿಗಾವಹಿಸಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮಘಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ, ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.ಬಳಿಕ ಈ ಬಗ್ಗೆ ಮನವಿಯನ್ನು ಪ್ರತಿಭಟನಕಾರರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಟಿ. ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರರಾದ ಪ್ರಮೋದ್ ಕಳೆಂಜ, ಪ್ರಸನ್ನ ಕಳೆಂಜ, ಧನಂಜಯ, ನಿತ್ಯಾನಂದ ರೈ, ಹರೀಶ್ ಕೆ.ಬಿ., ರಾಮಣ್ಣ ಗೌಡ, ನೋಣಯ್ಯ ಗೌಡ, ಕೃಷ್ಣಪ್ಪ ಗೌಡ, ರಮೇಶ್ ಶಿಬಾಜೆ, ಬಾಲಕೃಷ್ಣ ಶಿಬಾಜೆ, ಜಾರ್ಜ್, ಪ್ರಶಾಂತ್, ಜಾನ್ಸನ್ ಹಾಗೂ ಶಿಶಿಲ, ಕಳೆಂಜ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ, ಶಿರಾಡಿ, ರೆಖ್ಯ ಗ್ರಾಮವಾಸಿಗಳು ಉಪಸ್ಥಿತರಿದ್ದರು.

Share this article